ರಜಾದಿನವೂ ಬೆಂಗಳೂರು ನಗರ ಪಾಲಿಕೆ ಆಯುಕ್ತರಿಂದ ತಪಾಸಣೆ

south commissioner
Published on

ಬೆಂಗಳೂರು: ಬೆಂಗಳೂರು ನಗರದ ವಿವಿಧ ಪಾಲಿಕೆಗಳ ಆಯುಕ್ತರು ರಜಾದಿನವಾದ ಭಾನುವಾರವು ಕರ್ತವ್ಯನಿರ್ವಹಿಸಿದ್ದಲ್ಲದೆ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ ಅವುಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಇಂಜಿನಿಯರ್‌ಗಳಿಗೆ ಸೂಚಿಸಿದರು.

ಉತ್ತರ, ದಕ್ಷಿಣ, ಪೂರ್ವ ಹಾಗೂ ಕೇಂದ್ರ ಪಾಲಿಕೆಗಳ ಆಯುಕ್ತರು ತಮ್ಮ ಕಾರ್ಪೊರೇಷನ್ ವ್ಯಾಪ್ತಿಯ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳ ತಪಾಸಣೆ ನಡೆಸಿದರು. ಈ ವೇಳೆ ಮಳೆಯಿಂದ ಸಮಸ್ಯೆಯಾದ ಸ್ಥಳಗಳು, ತ್ಯಾಜ್ಯ ವಿಲೇವಾರಿಯ ಮಸ್ಟರಿಂಗ್ ಕೇಂದ್ರಗಳು, ರಾಜಕಾಲುವೆ, ಫುಟ್‌ಪಾತ್ ಒತ್ತುವರಿ ಪ್ರಕರಣಗಳ ಬಗ್ಗೆ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ತೆಗೆದುಕೊಳ್ಳುವಂತೆ ನಿರ್ದೇಶಿಸಿದರು.

ದಕ್ಷಿಣ ಪಾಲಿಕೆಯ ಆಯುಕ್ತ ಕೆ.ಎನ್. ರಮೇಶ್ ಅವರು ಈಜೀಪುರ ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿನ ಘಟಕ ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಹಾಲಿ ಕೆಲಸಕ್ಕಿಂತ ಪೂರ್ಣ ಪ್ರಮಾಣದ ಸಾಮರ್ಥ್ಯದಂತೆ ತ್ಯಾಜ್ಯ ವಿಂಗಡಣೆ ಕೈಗೊಳ್ಳಬೇಕು ಎಂದು ಸೂಚಿಸಿದರು.

7 ಕ್ಯಾಫ್ಸೂಲ್ ವಾಹನಗಳ ಬಳಕೆ:

ಈಜೀಪುರ ಘಟಕವು 2024ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದು, ನಿತ್ಯ 8 ವಾರ್ಡ್‌ಗಳಿಂದ ಅಂದಾಜು 160-170 ಮೆಟ್ರಿಕ್ ಟನ್ ತ್ಯಾಜ್ಯ ಸ್ವೀಕರಿಸಲಾಗುತ್ತಿದೆ. ಇಲ್ಲಿ 35 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಈ ಕಸವನ್ನು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಕ್ಯಾಪ್ಸೂಲ್ಗಳ (ಕಂಟೈನರ್) ಮೂಲಕ ರವಾನಿಸಲಾಗುತ್ತದೆ. ಘಟಕದಲ್ಲಿ 7 ಕ್ಯಾಫ್ಸೂಲ್ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಒಂದು ಕ್ಯಾಪ್ಸೂಲ್ ವಾಹನಕ್ಕೆ ಎರಡು ಕ್ಯಾಫ್ಸೂಲ್ಗಳು ಇರಲಿವೆ. ವಾರ್ಡ್‌ಗಳಿಂದ ಆಟೋ ಟಿಪ್ಪರ್‌ಗಳ ಮೂಲಕ ಬರುವ ತ್ಯಾಜ್ಯವನ್ನು ಕಂಪ್ರೆಸ್ ಮಾಡಿ ತುಂಬುವುದರಿಂದ 1 ಕ್ಯಾಫ್ಸೂಲ್ನಲ್ಲಿ 16-18 ಟನ್ ತ್ಯಾಜ್ಯ ತುಂಬಹುದಾಗಿದೆ. ಇದರಿಂದ ಕಡಿಮೆ ವಾಹನಗಳನ್ನು ಬಳಸಬಹುದಾಗಿದೆ ಎಂದು ಅಧಿಕಾರಿಗಳು ಆಯುಕ್ತರಿಗೆ ವಿವರಣೆ ನೀಡಿದರು.

ಇದೇ ಸ್ಥಳದಲ್ಲಿ ಸ್ವಯಂಚಾಲಿತ ತ್ಯಾಜ್ಯ ವಿಂಗಡಣಾ ಘಟಕದಲ್ಲಿ ಪ್ರತಿ ಗಂಟೆಗೆ 5 ಮೆಟ್ರಿಕ್ ಟನ್ ತ್ಯಾಜ್ಯದಂತೆ ಸುಮಾರು 40 ಮೆಟ್ರಿಕ್ ಟನ್ ಕಸವು ವಿಂಗಡಣೆಯಾಗುತ್ತದೆ. ಇದರಿಂದ ಭೂಭರ್ತಿ ಪ್ರದೇಶಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂಬುದನ್ನು ಇಂಜಿನಿಯರ್‌ಗಳು ವಿವರಿಸಿದರು.

ಘಟಕ ವೀಕ್ಷಣೆ ಬಳಿಕ ಮಾತನಾಡಿದ ಆಯುಕ್ತು, ಇದೇ ಮಾದರಿಯಲ್ಲಿ ಪ್ರತಿ ವಾರ್ಡ್‌ನಲ್ಲಿಯೂ ವರ್ಗಾವಣೆ ಕೇಂದ್ರ ಸ್ಥಾಪಿಸಿದರೆ ಕಸದ ಸಮಸ್ಯೆ ಸ್ಥಳೀಯವಾಗಿ ಬಗೆಹರಿಸಬಹುದು ಎಂದು ತಿಳಿಸಿದರು.

ಫುಟ್‌ಪಾತ್‌ಗಳಲ್ಲಿ ಶಾಶ್ವತ ನಿರ್ಮಾಣಗಳನ್ನು ತೆರವು:

ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಶಾಶ್ವತ ನಿರ್ಮಾಣಗಳನ್ನು ಮುಲಾಜಿಲ್ಲದೆ ತೆರವುಗೊಳಿಸುವಂತೆ ಆಯುಕ್ತ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಳ್ಳಂದೂರು ವಾರ್ಡ್ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರಿಗೆ ಪಾದಚಾರಿ ಮಾರ್ಗಗಳಲ್ಲಿ ಹಲವು ಪಟ್ಟಿಗೆ ಅಂಗಡಿಗಳಿರುವುದು ಎದುರಾದವು. ಇವುಗಳ ಬಗ್ಗೆ ದೂರು ಬಂದಿದ್ದರೂ, ಕ್ರಮ ಕೈಗೊಳ್ಳದ ಬಗ್ಗೆ ಆಕ್ಷೇಪಿಸಿ ತಕ್ಷಣವೇ ಜೆಸಿಬಿ ಯಂತ್ರವನ್ನು ತರಿಸಿ ಕೆಲವನ್ನು ತೆರವುಗೊಳಿಸಲಾಯಿತು. ಮತ್ತೆ ಇದೇ ಸ್ಥಳದಲ್ಲಿ ಮಳಿಗೆಗಳು ತಲೆಯೆತ್ತ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶುಚಿತ್ವ ಕಾಪಾಡದ ಹೋಟೆಲ್‌ಗೆ ದಂಡ:

ಪಾಕಶಾಲ ಹೋಟೆಲ್ನಲ್ಲಿರುವ ಅಡುಗೆ ಕೋಣೆಗೆ ಭೇಟಿ ನೀಡಿ ಆಯುಕ್ತರು ಪರಿಶೀಲಿಸಿದರು. ಈ ವೇಳೆ ಶುಚಿತ್ವ ಇಲ್ಲದಿರುವುದನ್ನು ಕಂಡು ಹೋಟೆಲ್ ಮಾಲೀಕರಿಗೆ 25 ಸಾವಿರ ರೂ. ದಂಡ ವಿಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ:

ಕೆ.ಆರ್.ಪುರ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳಲ್ಲಿ ಹೂಳೆತ್ತುವ, ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿ ತ್ವರಿತಗತಿಯಲ್ಲಿ ಕಾಯ ನಿರ್ವಹಿಸಲು ಅಧಿಕಾರಿಗಳಿಗೆ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net