

ಕುರುಗೋಡು: ಮೆಕ್ಕೆಜೋಳದ ತೆನೆಯಲ್ಲಿ ಕಾಳು ಕಟ್ಟದಿರುವುದರಿಂದ ನಷ್ಟ ಅನುಭವಿಸುತ್ತಿರುವ ರೈತ ಕರಡಿ ನಾಗಪ್ಪನಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ತಹಸೀಲ್ದಾರ್ ಕೆ.ರಾಘವೇಂದ್ರ ರಾವ್‌ಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಗೋವಿಂದಪ್ಪ ಎಂ. ಮಾತನಾಡಿ, ಮಳೆ ವೈಫಲ್ಯ, ಕಾಲುವೆ ನೀರಿನ ಅಭಾವದಿಂದ ರೈತರು ಕಂಗಾಲಾಗಿದ್ದಾರೆ. ಬಳ್ಳಾರಿಯ ಕಾರ್ತಿಕ್ ಅಗ್ರೋ ಸೀಡ್ಸ್ ಅಂಗಡಿಯಲ್ಲಿ ಖರೀದಿಸಿದ ಮೆಕ್ಕೆಜೋಳ ಬೀಜ ಕಳಪೆಯಾಗಿದೆ. ತೆನೆಯಲ್ಲಿ ಕಾಳು ಕಟ್ಟದೆ ರೈತರ ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ ವಿಜ್ಞಾನಿಗಳಿಂದ ಮೆಕ್ಕೆಜೋಳ ಬೆಳೆ ತಪಾಸಣೆ ನಡೆಸಿ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ತಹಸೀಲ್ದಾರ್ ಕೆ.ರಾಘವೇಂದ್ರ ರಾವ್ ಮಾತನಾಡಿ, ಬಿತ್ತನೆ ಮಾಡಿದ ಮೆಕ್ಕೆಜೋಳದ ಬೀಜ ಸಿಜೆಂಟಾ 6668 ಎಂದು ರೈತ ನಾಗಪ್ಪ ತಿಳಿಸಿದ್ದಾರೆ. ವಿಜ್ಞಾನಿಗಳಿಂದ ಪರಿಶೀಲನೆ ನಡೆಸಿ ವರದಿ ನೀಡುವಂತೆ ಉಪ ಕೃಷಿ ನಿರ್ದೇಶಕರಿಗೆ ಪತ್ರ ಬರೆಯಲಾಗುವುದು ಎಂದರು.
ಕೃಷಿ ಅಧಿಕಾರಿ ಎಚ್.ದೇವರಾಜ್ ಜಮೀನಿಗೆ ಭೇಟಿ ನೀಡಿ ಮಾತನಾಡಿ, ಇಲಾಖೆಗೆ ರೈತರ ಮನವಿ ಸಲ್ಲಿಸಿದರೆ ಬೀಜ ಪೂರೈಕೆ ಮಾಡಿದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರೈತ ನಾಗಪ್ಪ, ಪ್ರಮುಖರಾದ ಗೋವಿಂದಪ್ಪ, ಪಂಪಣ್ಣ, ಮಲ್ಲಿಕಾರ್ಜುನ ಗೌಡ, ಮದಿರೆ ಮಲ್ಲಿಕಾರ್ಜುನ ಇದ್ದರು.