ಇಲಾಖೆ ವ್ಯಾಪ್ತಿಯ ಭೂಮಿ ಪರಿಶೀಲಿಸಿ ವರದಿ ನೀಡಿ

06-oct-gpt-2
Published on

ಗುಂಡ್ಲುಪೇಟೆ: ಬಗರ್ ಹುಕುಂ ಯೋಜನೆಯಲ್ಲಿ ಸಾಗುವಳಿ ಚೀಟಿ ವಿತರಣೆ ಸಂಬಂಧ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ನೇತೃತ್ವದಲ್ಲಿ ಸೋಮವಾರ ಕಂದಾಯ ಹಾಗೂ ಅರಣ್ಯಾಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.

ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಶಾಸಕ ಗಣೇಶ್ ಪ್ರಸಾದ್, ಸರ್ಕಾರಿ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರು ಅಕ್ರಮ ಸಕ್ರಮ ಯೋಜನೆಯಲ್ಲಿ ಹಕ್ಕುಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದು ಈ ಭೂಮಿಯು ಅರಣ್ಯ ಇಲಾಖೆಗೆ ಸೇರಿದ್ದರೆ ಅಂತಹ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ನಂತರ ಅರಣ್ಯ ಇಲಾಖೆ ಗಡಿಕಲ್ಲು ನೆಡಲು ಆರಂಭಿಸಿದರೆ ಮತ್ತೆ ತೊಂದರೆಯಾಗುತ್ತದೆ. ಆದ್ದರಿಂದ ನಿಮ್ಮ ಇಲಾಖೆಯಿಂದ ಭೂಮಿಯನ್ನು ಪರಿಶೀಲಿಸಿ ವರದಿ ನೀಡಬೇಕು ಎಂದು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ಎಂ.ಎಸ್.ಚಿನ್ಮಯಿ, ಕಾಡಂಚಿನಲ್ಲಿ ಜನವಸತಿಯಿರುವ ಬಫರ್ ವಲಯ, ಮದ್ದೂರು, ಓಂಕಾರ್ ಹಾಗೂ ಕುಂದಕೆರೆ ವಲಯಗಳ ಅರಣ್ಯಾಧಿಕಾರಿಗಳು ಮತ್ತು ಕಂದಾಯಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net