

ಬಾದಾಮಿ: ನವಿಲುತೀರ್ಥ ಜಲಾಶಯದಿಂದ ಕಾಲುವೆಗೆ ನೀರು ಹರಿಸಬೇಕು. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಭಾರತೀಯ ಕಿಸಾನ್ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲಪ್ರಭಾ ಎಡದಂಡೆ ಕಾಲುವೆಗಳನ್ನು ಸ್ವಚ್ಛಗೊಳಿಸುವ ಜೊತೆಗೆ ದುರಸ್ತಿ ಕಾರ್ಯ ಕೈಗೊಂಡು ರೈತರಿಗೆ ಸಮರ್ಪಕ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ರೈತರಿಗೆ ಪರಿಹಾರ ದೊರಕಿಲ್ಲ. ಪರಿಹಾರ ವಿತರಿಸಬೇಕು. ಕಳಪೆ ಬೀಜ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ತಾಲೂಕಾಧ್ಯಕ್ಷ ಕಿರಣ ಕುಲಕರ್ಣಿ ಮಾತನಾಡಿ, ಬಾನಾಪುರ-ಗದ್ದನಕೇರಿ ಹೆದ್ದಾರಿಯ ನಾಗರಾಳ ಹತ್ತಿರ ನಿರ್ಮಿಸುತ್ತಿರುವ ಸೇತುವೆ ಅವೈಜ್ಞಾನಿಕವಾಗಿದೆ ಎಂದರು.
ಯುಕೆಪಿ ಸಂತ್ರಸ್ತರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಕಬ್ಬು ಬೆಳೆಗಾರರ ಸಂಘದ ಪ್ರಮುಖ ಸುಬ್ಬರಾಯಗೌಡ ಪಾಟೀಲ ಒತ್ತಾಯಿಸಿದರು.
ರೈತ ಮೋರ್ಚಾದ ಮಲ್ಲಯ್ಯ ಮುಪ್ಪಿನನ್ನವರ, ಕುಮಾರ ಯಡಹಳ್ಳಿ, ುಲಿಕೇಶಿ ಸೂಳಿಕೇರಿ, ರಮೇಶ ಗೌಡರ, ಯಲ್ಲಪ್ಪ ಪಾತ್ರೋಟಿ, ಮಹಾಂತೇಶ ಬಳಗೌಡರ ಸುದ್ದಿಗೋಷ್ಠಿಯಲ್ಲಿದ್ದರು.