

ಶಿರಸಿ: ತಾಲೂಕಿನ ಹೆಬ್ಬಲಸು ಬಳಿ ಸಣ್ಣ ನೀರಾವರಿ ಇಲಾಖೆ ನಿರ್ಮಿಸುತ್ತಿರುವ ಬಾಂದಾರು ಕಾಮಗಾರಿಗೆ ಕೆಲವೇ ಜನ ವಿರೋಧಿಸಿದ್ದು, ಅದನ್ನು ಪರಿಗಣಿಸದೆ ಕಾಮಗಾರಿ ಮುಂದುವರಿಸಬೇಕು ಎಂದು ಈ ಭಾಗದ ಜನ ಸ್ಥಳಕ್ಕೆ ಆಗಮಿಸಿ ಶುಕ್ರವಾರ ಒತ್ತಾಯಿಸಿದರು.
ನೆಗ್ಗು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿನಾಯಕ ಹೆಗಡೆ ಹೆಬ್ಬಲಸು, ಬಾಂದಾರವು ನೆಗ್ಗು ಹಾಗೂ ಜಾನ್ಮನೆ ಗ್ರಾಮ ಪಂಚಾಯಿತಿಯನ್ನು ಜೋಡಿಸುತ್ತದೆ. ನೆಬ್ಬೂರು, ರೇವಣಕಟ್ಟಾ ಭಾಗದ ಜನ ಹೇರೂರು ರಸ್ತೆ ಸಂಪರ್ಕ ಪಡೆಯಲು ಅಮ್ಮಿನಳ್ಳಿ, ಕೊಳಗಿಬೀಸ್ ಮೂಲಕ ತೆರಳುತ್ತಿದ್ದಾರೆ. ಬಾಂದಾರು ನಿರ್ಮಾಣವಾದರೆ ಸುಮಾರು 10 ಕಿ.ಮೀ.ಯಷ್ಟು ಪ್ರಯಾಣ ಕಡಿಮೆ ಆಗಲಿದೆ. ಅಲ್ಲದೆ ಇಲ್ಲಿಯ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. 2021-22ರಲ್ಲಿ 2 ಕೋಟಿ ರೂ. ನಲ್ಲಿ ನಿರ್ಮಿಸಲಾಗುತ್ತಿರುವ ಈ ಕಾಮಗಾರಿಯಿಂದ ಯಾವುದೇ ತೊಂದರೆ ಇಲ್ಲ ಎಂದರು.
ನೆಗ್ಗು ಗ್ರಾಪಂ ಮಾಜಿ ಅಧ್ಯಕ್ಷೆ ನಾಗವೇಣಿ ಆಚಾರಿ, ವಿದ್ಯಾರ್ಥಿಗಳಿಗೆ ಪ್ರಯೋಜನ ಆಗುವ ಹಿನ್ನೆಲೆಯಲ್ಲಿ ಯೋಜನೆಗೆ ಅವಕಾಶ ಮಾಡಿಕೊಡಬೇಕು ಎಂದರು.
ವಕೀಲ ಶ್ರೀಪಾದ ನಾಯ್ಕ ಮಾತನಾಡಿ, ಹಿಂದೆ ತಹಸೀಲ್ದಾರ್ ಸಮ್ಮುಖದಲ್ಲಿ ಬೈಟಕ್ ನಡೆದಿದ್ದು, ಪಶ್ಚಿಮ ವಾಹಿನಿ ನದಿಗಳ ಪ್ರಯೋಜನವನ್ನು ಕೃಷಿಕರಿಗೆ ಸಿಗುವಂತೆ ಮಾಡಬೇಕು ಎಂಬ ಬಗ್ಗೆ ಸೂಚನೆ ನೀಡಿದ್ದರು. ಬಾಂದಾರು ನಿರ್ಮಾಣದಿಂದ ಕೃಷಿಕರಿಗೆ ಪ್ರಯೋಜನವಾಗುವ ಜತೆಗೆ ಭೂಮಿಯಲ್ಲಿಯೂ ನೀರು ಇಂಗಬೇಕು ಎಂಬ ಉದ್ದೇಶದಿಂದ ಈ ಕಾಮಗಾರಿ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಕೆಲವರು ಗೊಂದಲ ಮೂಡಿಸಿ ಕಾಮಗಾರಿಗೆ ತೊಡಕು ಉಂಟು ಮಾಡುವುದು ಸರಿಯಲ್ಲ. ಅನಗತ್ಯ ಗೊಂದಲ ಮೂಡಿಸಿದರೆ ಸಾರ್ವಜನಿಕರಿಗೂ ತಪ್ಪು ಮಾಹಿತಿ ನೀಡಿದಂತಾಗುತ್ತದೆ ಎಂದರು.
ನರಸಿಂಹ ಹೆಗಡೆ ಹೆಬ್ಬಲಸು, ವಿ. ಎಂ. ಹೆಗಡೆ ಹಣಗಾರ, ಶ್ರೀಪತಿ ಹೆಗಡೆ ನೇರ್ಲದ್ದ, ದಿವಾಕರ ಹೆಗಡೆ, ಲಕ್ಷಿ ನಾಯ್ಕ, ರೇಖಾ ಪಟಗಾರ, ದಿನೇಶ ಅಲಗೇರಿಕರ್, ರಾಮಚಂದ್ರ ಗೌಡ, ಶರಾವತಿ ಗೌಡ, ಸುಬ್ರಹ್ಮಣ್ಯ ಹೆಗಡೆ ಸುತ್ಮನೆ ಇತರರಿದ್ದರು.
ಕೃಷಿಕರಿಗೆ ತೊಂದರೆ ಇಲ್ಲ
ಹೆಬ್ಬಲಸಿನ ಬಾಂದಾರ ಕುರಿತು ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ವಿಕಾಸ ನಾಯ್ಕ, ಬಾಂದಾರು ಕಂ ಸೇತುವೆ ನಿರ್ಮಾಣದಿಂದ ಯಾವ ಕೃಷಿಕರಿಗೂ ತೊಂದರೆಯಾಗುವುದಿಲ್ಲ. ಕೇವಲ 4 ಮೀಟರ್ ಬಾಂದಾರು ನಿರ್ಮಿಸಲಾಗುತ್ತಿದ್ದು, 1.5 ಮೀಟರ್ ಎತ್ತರದವರೆಗೆ ನೀರು ನಿಲ್ಲಿಸಲಾಗುತ್ತಿದೆ. ಮುಂದಿನ 2 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಿದ್ದೇವೆ. ಸೇತುವೆ ನಿರ್ಮಾಣದಿಂದ ನೆಗ್ಗು ಗ್ರಾಮ ಪಂಚಾಯಿತಿಯ 5 ಗ್ರಾಮಗಳು, ಜಾನ್ಮನೆ ಪಂಚಾಯಿತಿಯ 7 ಗ್ರಾಮಗಳಿಗೆ ಸಂಪರ್ಕ ರಸ್ತೆ ನಿರ್ಮಾಣವಾದಂತಾಗುತ್ತದೆ. ಪಶ್ಚಿಮ ವಾಹಿನಿ ಯೋಜನೆಯಲ್ಲಿ ಈ ಕಾಮಗಾರಿ ನಿರ್ಮಿಸಲಾಗುತ್ತಿದ್ದು, ಯಾರಿಗೂ ಸಮಸ್ಯೆ ಆಗದಂತೆ ಕಾಮಗಾರಿ ಪೂರ್ಣಗೊಳಿಸಲಿದ್ದೇವೆ ಎಂದಿದ್ದಾರೆ.