ಕೆರೆ ತುಂಬಿಸಲು ಕಾಲುವೆಗೆ ನೀರು ಹರಿಸಲು ರೈತರ ಒತ್ತಾಯ

AKRS-1
ವಿಜಯಪುರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿಗೆ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅರವಿಂದ ಕುಲಕರ್ಣಿ, ಸದಾಶಿವ ಬರಟಗಿ, ಹೊನಕೇರಪ್ಪ ತೆಲಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ಲಾಲ್‌ಬಹದ್ದೂರ ಶಾಸ್ತ್ರೀ ಜಲಾಶಯ ವ್ಯಾಪ್ತಿಗೆ ಬರುವ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಗೆ ಸಂಬಂಧಿಸಿದ ಎಲ್ಲಾ ಕಾಲುವೆಗಳಿಗೆ ನೀರು ಹರಿಸಿ ಜಿಲ್ಲೆಯ ಎಲ್ಲ ಕೆರೆಗಳನ್ನು ಭರ್ತಿ ಮಾಡಿ ಜನ ಹಾಗೂ ಜಾನುವಾರುವಿಗೆ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಲು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮುಖಾಂತರ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಈ ಬಾರಿ ಮುಂಗಾರು ಹಂಗಾಮಿನಲ್ಲಿ ಆಗಬೇಕಿದ್ದ ಮಳೆ ಜುಲೈ ಮುಗಿಯುತ್ತಾ ಬಂದರೂ ಸುರಿದಿಲ್ಲ. ಇದರಿಂದ ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದೆ. ಈ ಹಿಂದೆ ಭರ್ತಿ ಮಾಡಿದ ಜಿಲ್ಲೆಯ ಬಹತೇಕ ಕೆರೆಗಳಲ್ಲಿ ನೀರು ಬರಿದಾಗುತ್ತಿವೆ. ಇದರಿಂದ ಅಂತರ್ಜಲಮಟ್ಟ ಕುಸಿದು, ಕೊಳವೆ ಬಾವಿ ಹಾಗೂ ತೆರೆದ ಬಾವಿಗಳಲ್ಲಿ ನೀರು ಭತ್ತಿ ಹೋಗಿವೆ. ಜಾನುವಾರುವಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದರು.

ಈಗಾಗಲೇ ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿರುವುದರಿಂದ ಲಾಲ್‌ಬಹದ್ದೂರ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯದಲ್ಲಿ ಡೆಡ್ ಸ್ಟೋರೇಜ್ 17ಟಿಎಂಸಿ ಹೊರತುಪಡಿಸಿದರೂ 8 ಟಿಎಂಸಿ ಲೈವ್ ಕೆಪಾಸಿಟಿ ಇದೆ. ಇದರಲ್ಲಿ ಕೇವಲ 1 ಟಿಎಂಸಿ ನೀರು ಹರಿಸಿದರೆ ಸಾಕು ಎಲ್ಲಾ ಕೆರೆ-ಕಟ್ಟೆಗಳು ಭರ್ತಿಯಾಗುತ್ತವೆ. ಆದ್ದರಿಂದ ತಕ್ಷಣ ಎಲ್ಲಾ ಕಾಲುವೆಗಳಿಗೆ ನೀರು ಹರಿಸಬೇಕೆಂದು ಮನವಿ ಮಾಡಿದರು.

ಒಂದು ವೇಳೆ ನೀರು ಪೂರೈಸದಿದ್ದರೆ ಆಲಮಟ್ಟಿಯ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರರ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಕುಳಿತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ಹೊನಕೇರಪ್ಪ ತೆಲಗಿ, ಈರಣ್ಣ ದೇವರ ಗುಡಿ, ಈರಪ್ಪ ತೇಲಿ, ನಂದುಗೌಡ ಬಿರಾದಾರ, ಚನ್ನಬಸಪ್ಪ ಸಿಂಧೂರ, ಮಲ್ಲು ಕೊಗಟನೂರ, ಅರ್ಜುನ ಹಾವಗೊಂಡ, ಸಿಕಿಂದರ ಕರ್ಜಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net