ಉಚಿತ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ರೈತರ ಒತ್ತಾಯ

mysore
Published on

ಮೈಸೂರು: ಬರಗಾಲದಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಬಿತ್ತನೆ ಬೀಜ, ರಸಗೊಬ್ಬರವನ್ನು ಉಚಿತವಾಗಿ ನೀಡಬೇಕು. ಆರ್‌ಟಿಸಿಗೆ ಆಧಾರ್ ಜೋಡಣೆ ಪ್ರಕ್ರಿಯೆ ಸರಳೀಕರಣಗೊಳಿಸಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಆಗ್ರಹಿಸಿದೆ.


ನಗರದಲ್ಲಿ ರೈತರ ಸಭೆ ನಡೆಸಿ ಈ ವಿಷಯದ ಕುರಿತು ಚರ್ಚಿಸಲಾಯಿತು. ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದು, ಕೃಷಿ ಚಟುವಟಿಕೆ ನಡೆಸಲು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಬರ ಪರಿಹಾರದ ಹಣ ಎಲ್ಲ ರೈತರಿಗೂ ದೊರೆತರೆ ಅನುಕೂಲವಾಗುತ್ತದೆ. ಕೂಡಲೇ ಕ್ರಮ ಕೈಗೊಂಡು ರೈತರ ಹಿತ ರಕ್ಷಣೆ ಮಾಡಬೇಕು.

ಸರ್ಕಾರ ಘೋಷಣೆ ಮಾಡಿದ ಹೆಚ್ಚುವರಿ ದರ ಪ್ರತಿ ಟನ್ ಕಬ್ಬಿಗೆ 150 ರೂ. ಬಣ್ಣಾರಿ ಸಕ್ಕರೆ ಕಾರ್ಖಾನೆ ರೈತರಿಗೆ ಇನ್ನೂ ಪಾವತಿಯಾಗಿಲ್ಲ. ಈ ಹಣವನ್ನು ರೈತರಿಗೆ ಕೊಡಿಸಬೇಕು ಎಂದು ಒತ್ತಾಯಿಸಿದರು.


ಇತ್ತೀಚೆಗೆ ಸುರಿದ ಭಾರಿ ಮಳೆಗಾಳಿಯಿಂದ ಬಾಳೆ, ಕಬ್ಬು, ಮಾವು ಮತ್ತಿತರ ಬೆಳೆಗಳು ಹಾನಿಯಾಗಿದೆ. ಈ ಬಗ್ಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಸಮೀಕ್ಷೆ ನಡೆಸಿ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು.

ಮುಂಗಾರು ಮಳೆ ಮುನ್ನ ತಾಲೂಕಿನ ಎಲ್ಲ ಕೆರೆಗಳ ಕಾಲುವೆಗಳ ಹೂಳೆತ್ತುವ ಕಾರ್ಯ ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಬರ ಪರಿಹಾರ ಜಂಟಿ ಖಾತೆದಾರ ರೈತರಿಗೆ, ಬಗರ್‌ಹುಕುಂ ಸಾಗುವಳಿ ರೈತರಿಗೆ ಪರಿಹಾರ ಸಿಕ್ಕಿಲ್ಲ. ಇವರಿಗೂ ಪರಿಹಾರ ಸಿಗುವಂತಾಗಬೇಕು. ಬ್ಯಾಂಕ್‌ಗಳು ಸರ್ಕಾರದ ಪರಿಹಾರದ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುವುದನ್ನು ತಪ್ಪಿಸುವಂತೆ ಒತ್ತಾಯಿಸಲು ರೈತರು ಒಕ್ಕೋರಲು ನಿರ್ಧಾರ ಕೈಗೊಂಡರು.


ಸಭೆಯಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಕಾಟೂರು ಮಾದೇವಸ್ವಾಮಿ, ಮುಖಂಡರಾದ ವರಕೋಡು ನಾಗೇಶ್, ಗಿರೀಶ್, ನಂಜುಂಡಸ್ವಾಮಿ, ಸಿದ್ದರಾಮ, ಪ್ರಕಾಶ್, ಸೋಮು, ಶ್ರೀಕಂಠ ನಾಗೇಶ್, ಶಿವಣ್ಣ, ಚೋರನಹಳ್ಳಿ ಪುಟ್ಟಸ್ವಾಮಿ, ಮಾರ್ಬಳ್ಳಿ ಗುಂಡು ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net