

ಮೊಳಕಾಲ್ಮೂರು: ಕಾಂಗ್ರೆಸ್ ಪಕ್ಷ ನೀಡಿದ ವಾಗ್ದಾನದಂತೆ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತರು ತಾಲೂಕು ಆಡಳಿತ ಸೌಧದ ಬಳಿ ಶುಕ್ರವಾರ ಧರಣಿ ನಡೆಸಿದರು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡೇಷನ್, ಸಿಪಿಐ ಸಂಘಟನೆ ನೇತೃತ್ವದಲ್ಲಿ ಧರಣಿ ನಡೆಸಿದ ಕಾರ್ಯಕರ್ತೆಯರು, ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಬೆಳಗಾಂ ಜಿಲ್ಲೆ ಖಾನಾಪುರದಲ್ಲಿ ಪ್ರಿಯಾಂಕಾ ಗಾಂಧಿ ಘೋಷಣೆ ಮಾಡಿದಂತೆ 15 ಸಾವಿರ ರೂ. ವೇತನ ಹೆಚ್ಚಳ ಭರವಸೆ ಅನುಷ್ಠಾನಕ್ಕೆ ತರಲು ಸಿದ್ದರಾಮಯ್ಯ ಮುಂದಾಗಬೇಕು ಎಂದು ತಿಳಿಸಿದರು.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ನುಡಿದಂತೆ ನಡೆಯುವ ಪಕ್ಷ ಕಾಂಗ್ರೆಸ್. ಸರ್ಕಾರದ ನೇತೃತ್ವ ವಹಿಸಿರುವ ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಬಳಿಕ ತಹಸೀಲ್ದಾರ್ ಎಂ.ವಿ.ರೂಪಾ ಆವರಿಗೆ ಮನವಿ ಪತ್ರ ಸಲ್ಲಿಸಿದರು. ಸಿಪಿಐ ತಾಲೂಕು ಕಾರ್ಯದರ್ಶಿ ಮಹಮದ್ ಜಾಫರ್, ಅಂಗನವಾಡಿ ಫೆಡರೇಷನ್ ತಾಲೂಕಾಧ್ಯಕ್ಷೆ ಸಿ.ಲಕ್ಷ್ಮೀದೇವಿ, ಕಾರ್ಯದರ್ಶಿ ಜ್ಯೋತಿಲಕ್ಷ್ಮೀ, ಮಹದೇವಿ, ರಜಿಯಾ, ಸರಸ್ವತಮ್ಮ ಇದ್ದರು.