

ಹಿರೇಕೆರೂರ: ತಾಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಘಟಕ ಬಂದ್ ಆಗಿ ವರ್ಷಗಳೇ ಕಳೆದಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಘಟಕ ದುರಸ್ತಿಗೆ ಕ್ರಮಕೈಗೊಳ್ಳದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಸಾತೇನಹಳ್ಳಿಯಲ್ಲಿ 2 ಸಾವಿರ ಜನಸಂಖ್ಯೆಯಿದೆ. ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ಜಿಪಂ ಉಪವಿಭಾಗದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಶಾಸಕರ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ಮಂಜೂರಾತಿ ದೊರೆತಿತ್ತು. ಕುಡಿಯುವ ನೀರಿನ ಘಟಕ ಸ್ಥಾಪನೆ ಹಾಗೂ 5 ವರ್ಷ ನಿರ್ವಹಣೆ ಜವಾಬ್ದಾರಿ ಖಾಸಗಿ ಏಜೆನ್ಸಿಯವರಿಗೆ ವಹಿಸಲಾಗಿತ್ತು. ಆರಂಭದಲ್ಲಿ ಉತ್ತಮ ಸೇವೆ ನೀಡಿದ ಘಟಕ, ನಂತರ ಯಂತ್ರಗಳು ಮತ್ತು ನೀರಿನ ಸಮಸ್ಯೆ ಹೀಗೆ ಒಂದಿಲ್ಲೊಂದು ಸಮಸ್ಯೆಯಿಂದ ಬಂದ್ ಆಗಿದೆ. ಈ ಕುರಿತು ಗ್ರಾಪಂ ಪಿಡಿಒ ಮತ್ತು ಸಾರ್ವಜನಿಕರು ಸಂಬಂಧಿಸಿದ ಏಜೆನ್ಸಿಯವರು ಹಾಗೂ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ಕೊನೆಗೆ ಶಾಸಕರ ಗಮನಕ್ಕೆ ಬಂದಿದ್ದು, ಅಧಿಕಾರಿಗಳು, ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿ, ನೀರಿಗಾಗಿ ಹೊಸದಾಗಿ ಬೋರ್ವೆಲ್ ಕೊರೆಸಿ ಕುಡಿಯುವ ನೀರಿನ ಘಟಕ ಒದಗಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಸೂಚಿಸಿದ್ದರು. ಆದರೂ ಇಲ್ಲಿಯವರೆಗೆ, ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾಗಿಲ್ಲ. ಇದರಿಂದ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸಿಗದೇ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿ, ನೀರಿನ ಘಟಕ ಆರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿ ವರ್ಷಗಳೇ ಕಳೆದಿವೆ. ಈ ಕುರಿತು ಪಿಡಿಒ, ಜಿಪಂ ಇಲಾಖೆ ಮತ್ತು ಶಾಸಕರ ಗಮನಕ್ಕೆ ತರಲಾಗಿದೆ. ಹೊಸದಾಗಿ ಬೋರ್ವೆಲ್ ಕೊರೆಸಿ ನೀರಿನ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದರು. ಆದರೆ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಶುದ್ಧ ಕುಡಿಯುವ ನೀರು ಸಿಗದೆ ಗ್ರಾಮದಲ್ಲಿ ಅನೇಕರು ರೋಗದಿಂದ ಬಳಲುವಂತಾಗಿದೆ. ಶೀತ, ಕೆಮ್ಮು, ಜ್ವರ ಸೇರಿ ಅನೇಕ ಕಾಯಿಲೆಗಳಿಂದ ಜನರು ಆಸ್ಪತ್ರೆಗೆ ಸೇರುವಂತಾಗಿದೆ. ಕೂಡಲೇ ಇಲ್ಲಿನ ಘಟಕವನ್ನು ಆರಂಭಿಸಬೇಕು. | ಚಂದ್ರಪ್ಪ ಮಾನೇರ, ಅಖಿಲ ಕರ್ನಾಟಕ ಹಾವೇರಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೂಡಲೇ ಸ್ಥಳಕ್ಕೆ ಇಲಾಖೆಯ ಇಂಜಿನಿಯರ್ ಮತ್ತು ಸಂಬಂಧಿಸಿದ ಏಜೆನ್ಸಿಯವರನ್ನು ಕಳುಹಿಸಿ, ಶುದ್ಧ ಕುಡಿಯುವ ನೀರಿನ ಘಟಕದ ಕುರಿತು ಪರಿಶೀಲನೆ ನಡೆಸಿ, ಮಾಹಿತಿ ಪಡೆದು, ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. | ನಂದೀಶ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್