

ಶಿಗ್ಗಾಂವಿ: ಸಂತ ಶಿಶುನಾಳ ಶರೀಫ ಪ್ರಾಧಿಕಾರ ರಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಶಿಗ್ಗಾಂವಿ ತಾಲೂಕು ಘಟಕದ ವತಿಯಿಂದ ಬುಧವಾರ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ರಾಮು ತಳವಾರ ಮಾತನಾಡಿ, ನಾಡಿಗೆ ಮೊದಲ ಮಹಮ್ಮದೀಯ ಕವಿ ಎನಿಸಿಕೊಂಡಿರುವ ಶಿಶುವಿನಹಾಳದ ಶರೀಫ ಶಿವಯೋಗಿಗಳು ತಮ್ಮ ತತ್ವ ಪದಗಳ ಮೂಲಕ ಕುಲ, ಜಾತಿ, ಮತ, ಬೇಧಗಳನ್ನು ಹೋಗಲಾಡಿಸಲು ನಾಡಿನಾದ್ಯಂತ ಸಂಚರಿಸಿದ ಮಹಾನುಭಾವರಾಗಿದ್ದಾರೆ. ಪವಾಡಪುರುಷ ಶರೀಫರ ಹೆಸರಿನಿಂದ ಪ್ರಾಧಿಕಾರ ರಚಿಸಬೇಕು ಎಂದು ಈ ಭಾಗದ ಹಲವು ಕನ್ನಡ ಪರ ಸಂಘಟನೆಗಳು ಹಿಂದಿನಿಂದಲೂ ಸರ್ಕಾರಗಳನ್ನು ಒತ್ತಾಯಿಸುತ್ತ ಬಂದಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಈ ಹಿಂದಿನ ಸರ್ಕಾರ ಶಿಸುವಿನಹಾಳದಲ್ಲಿರುವ ಶರೀಫಗಿರಿ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದರೂ ಪ್ರಾಧಿಕಾರ ರಚನೆ ಸಾಧ್ಯವಾಗಿಲ್ಲ. ಈಗಿ ಕಾಂಗ್ರೆಸ್ ಸರ್ಕಾರ ಈಗಲಾದರೂ ಪ್ರಾಧಿಕಾರ ರಚನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ತಾಲೂಕಾಧ್ಯಕ್ಷ ಸುರೇಶ ವನಹಳ್ಳಿ ಮಾತನಾಡಿ, ಶರೀಫ ಗಿರಿಯಲ್ಲಿ ಪ್ರಾಧಿಕಾರ ಸ್ಥಾಪನೆಯಿಂದ ಶರೀಫರ ತತ್ವ ಸಿದ್ದಾಂತವನ್ನು ಹೆಚ್ಚಿನ ರೀತಿಯಲ್ಲಿ ಅಧ್ಯಯನ ನಡೆಸಿ ನಾಡಿದಾದ್ಯಂತ ಪ್ರಸಾರ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ, ನಾಡಿನಲ್ಲಿ ಭಾವೈಕ್ಯದ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರ 2025ರ ಮಾರ್ಚ್ನಲ್ಲಿ ಮಂಡಿಸುವ ಬಜೆಟ್ನಲ್ಲಿ ಪ್ರಾಧಿಕಾರ ಘೊಷಣೆ ಮಾಡಿ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಧನಂಜಯ ಎಂ. ಮನವಿ ಸ್ವೀಕರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಉಪಾಧ್ಯಕ್ಷ ರಮೇಶ ಹರಿಜನ, ರೈತ ಘಟಕದ ತಾಲೂಕಾಧ್ಯಕ್ಷ ವೀರಭದ್ರಗೌಡ ಪೊಲೀಸಗೌಡ್ರ, ತಾಲೂಕು ಕಾರ್ವಿುಕ ಘಟಕದ ಅಧ್ಯಕ್ಷ ಖಾಸಿಂಸಾಬ್ ಮುಲ್ಲಾ, ರಮೇಶ ಈಟಿ, ಗಣಪತಿ ಕಲಗುದರಿ, ಬಸವರಾಜ ಶಿಡ್ಲಾಪುರ, ಮಂಜುನಾಥ ಅವಲಿ, ಅರ್ಜುನ ತಳವಾರ, ರಮೇಶ ದೇವಗಿರಿ, ಮಮತ್ತಾಜ್ ಬಾಳಣ್ಣನವರ, ಅರುಣ ಅಡ್ರಕಟ್ಟಿ, ಇತರರಿದ್ದರು.
ಶಿವಯೋಗಿ ಸಂತ ಶಿಶುನಾಳ ಶರೀಫ, ಪ್ರಾಧಿಕಾರ ರಚಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಶಿಗ್ಗಾಂವಿ ತಾಲೂಕು ಘಟಕದ ವತಿಯಿಂದ ಬುಧವಾರ ತಹಸೀಲ್ದಾರ್ ಧನಂಜಯ ಎಂ. ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ರಾಮು ತಳವಾರ, ತಾಲೂಕಾಧ್ಯಕ್ಷ ಸುರೇಶ ವನಹಳ್ಳಿ, ರಮೇಶ ಹರಿಜನ, ವೀರಭದ್ರಗೌಡ ಪೊಲೀಸಗೌಡ್ರ, ಖಾಸಿಂಸಾಬ್ ಮುಲ್ಲಾ, ಇತರರಿದ್ದರು.