

ಮೈಸೂರು: ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಮತ್ತು ಸಂಪೂರ್ಣ ಉತ್ಪನ್ನದ ಸಂಗ್ರಹಣೆಯ ಖಾತರಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.
ನಗರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಚೇರಿಗೆ ಶುಕ್ರವಾರ ಭೇಟಿ ನೀಡಿ, ಸಂಸದರ ಅವರ ಆಪ್ತ ಸಹಾಯಕರ ಮೂಲಕ ಸಂಸದರಿಗೆ ಮನವಿ ಸಲ್ಲಿಸಲಾಯಿತು.
ರೈತರು ಮತ್ತು ಕೃಷಿ ಕಾರ್ಮಿಕರನ್ನು ಸಾಲದ ಶೂಲದಿಂದ, ಆತ್ಮಹತ್ಯೆಗಳಿಂದ ಹಾಗೂ ಸಂಕಷ್ಟದಿಂದ ರಕ್ಷಿಸಲು ಸಮಗ್ರ ಸಾಲ ಮನ್ನಾಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ವಿದ್ಯುಚ್ಛಕ್ತಿ ವಲಯದ ಖಾಸಗೀಕರಣ ಮತ್ತು ಪ್ರೀಪೇಯ್ಡ ಸ್ಮಾರ್ಟ್ ಮೀಟರ್‌ಗಳ ಪ್ರಸ್ತಾಪ ಕೈ ಬಿಡಲು ಸೂಚಿಸಬೇಕು ಎಂದು ಕೋರಿದರು.
ರಸಗೊಬ್ಬರ, ಬೀಜ, ಕ್ರಿಮಿ ಕಳೆ ನಾಶಕಗಳು, ವಿದ್ಯುತ್, ನೀರಾವರಿ, ಯಂತ್ರೋಪಕರಣಗಳು, ಬಿಡಿ ಭಾಗಗಳು ಹಾಗೂ ಟ್ರಾಕ್ಟರ್‌ಗಳಂತಹ ಕೃಷಿ ಉತ್ಪನ್ನಗಳ ಮೇಲೆ ಜಿಎಸ್‌ಟಿ ಹಾಕಬಾರದು. ಕೃಷಿ ಸಬ್ಸಡಿಯನ್ನು ಪುನಃ ಜಾರಿ ಮಾಡಬೇಕು. ಸರ್ಕಾರಿ ಯೋಜನೆಗಳಂತಹ ಲಾಭವನ್ನು ಪಾಲು ಬೆಳೆಗಾರರು ಮತ್ತು ಗೇಣಿದಾರ ರೈತರಿಗೂ ವಿಸ್ತರಿಸಬೇಕು. ಎಲ್ಲ ಕೃಷಿ ಮತ್ತು ಪಶು ಸಂಗೋಪನೆ ವ್ಯವಸ್ಥೆಗಳಿಗೂ ಸಾರ್ವಜನಿಕ ವಲಯದಲ್ಲಿ ಸಂಪೂರ್ಣ ವಿಮೆ ಸೌಲಭ್ಯ ಕಲ್ಪಿಸಬೇಕು. ಕಾರ್ಪೋರೇಟ್ ಪರವಾದ ಪಿಎಂಎಫ್‌ಬಿವೈ ಯೋಜನೆಯನ್ನು ರದ್ದುಪಡಿಸಬೇಕು.