ಒಳ ಮೀಸಲಾತಿಗೆ ಒತ್ತಾಯ

15 - Copy
Published on

ಮೈಸೂರು: ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ಪ್ರಗತಿಪರ, ದಲಿತ ಮತ್ತು ಮಾದಿಗ ಸಂಘಟನೆಗಳ ಒಕ್ಕೂಟದಿಂದ ಪುರಭವನ ಮುಂಭಾಗವಿರುವ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
3 ದಶಕಗಳಿಂದ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದರೂ ನ್ಯಾಯಯುತ ಬೇಡಿಕೆ ಈಡೇರಿಸುವಲ್ಲಿ ರಾಜ್ಯವಾಳಿದ ಎಲ್ಲ ಸರ್ಕಾರಗಳು ವಿಫಲವಾಗಿವೆ. ಮಾದಿಗ ಮತ್ತು ಇತರ ಉಪಜಾತಿಗಳ ಬೇಡಿಕೆ ಸಾಮಾಜಿಕ ನ್ಯಾಯದ ಪರವಾಗಿದ್ದು ಸಂವಿಧಾನದ ಯಾವ ಅಂಶವೂ ಇದಕ್ಕೆ ವಿರುದ್ಧವಾಗಿಲ್ಲ. ಆದರೂ, ನ್ಯಾಯಮೂರ್ತಿ ಅರುಣ್ ಮಿಶ್ರ ನೇತೃತ್ವದ ಪಂಚಪೀಠ ನೀಡಿರುವ ತೀರ್ಪು ಸಾಕ್ಷಿಯಾಗಿದ್ದರೂ ಯಾವ ಸರ್ಕಾರಗಳು ಒಳ ಮೀಸಲಾತಿ ನೀಡದೆ ಇರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.


ಇಷ್ಟೊಂದು ದೊಡ್ಡ ಸಮೂಹದ ಹೋರಾಟ ಕಡೆಗಣಿಸಿ ಕೆಳ ಸಮುದಾಯಗಳ ಹಕ್ಕನ್ನು ದಮನ ಮಾಡಲು ಹೊರಟಿರುವುದು ಖಂಡನೀಯ. ಈ ಹೋರಾಟ ಪರಿಶಿಷ್ಟ ಜಾತಿಗಳ ಒಳಗೆ ಬರುವ ನೂರೊಂದು ಜಾತಿಗಳಿಗೆ ಸಂಬಂಧಿಸಿದ್ದು, ಇವರೆಲ್ಲರೂ ಎಲ್ಲ ಕ್ಷೇತ್ರಗಳಲ್ಲಿಯೂ ವಂಚಿತರಾಗಿದ್ದಾರೆ. ಇವರೆಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎನ್ನುವ ಉದ್ದೇಶದಿಂದ ಸುಮಾರು 30 ವರ್ಷಗಳಿಂದ ನಡೆಯುತ್ತಿರುವ ಈ ಹೋರಾಟದಲ್ಲಿ ಹಲವಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಜೈಲಿಗೆ ಹೋಗಿದ್ದಾರೆ. ರಾಜಕೀಯ ಲಾಭಕ್ಕಾಗಿ ಎಡ-ಬಲವೆಂದು ಎತ್ತಿ ಕಟ್ಟುವ ಕೆಲಸವನ್ನು ಆಡಳಿತ ಪಕ್ಷಗಳು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಕೂಡಲೇ ಸದಾಶಿವ ಆಯೋಗದ ವರದಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ವಿ.ಮೂರ್ತಿ, ಶಿವಣ್ಣ, ಈಶ್ವರ್, ರಾಚಪ್ಪ, ಕನಕಮೂರ್ತಿ, ಸಿ.ರಮೇಶ್, ಸೋಮಶೇಖರ್, ರವೀಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net