

ಎನ್.ಆರ್.ಪುರ: ಶ್ರಮ ಜೀವಿಗಳಾದ ಮೇದಾರ ಜನಾಂಗದ ಅಭಿವೃದ್ಧಿಗೆ ಮೇದ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಚಿತ್ರದುರ್ಗ ಮೇದರ ಗುರುಪೀಠದ ಇಮ್ಮಡಿ ಬಸವ ಮೇದರಕೇತೇಶ್ವರ ಸ್ವಾಮೀಜಿ ಒತ್ತಾಯಿಸಿದರು.
ಮೇದರ ಬೀದಿಯಲ್ಲಿ ಕರಿಯಮ್ಮ ದೇವಿ ಮತ್ತು ಅಂತರಘಟ್ಟಮ್ಮ ದೇವಿ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿ, ಹಿಂದೆ ಬಸವರಾಜ ಬೊಮ್ಮಯಿ ಅವರು ಮುಖ್ಯಮಂತ್ರಿಯಾದಾಗ ಆಯೋಜಿಸಿದ್ದ ಮೇದ ಜನಾಂಗದ ಸಮಾಜವೇಶದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿದಿರು ಉತ್ಪನ್ನಗಳ ಮಾರಾಟಕ್ಕೆ ಮೇದ ಅಭಿವೃದ್ಧಿ ನಿಗಮ ಸ್ಥಾಪಿಸಲು ಮನವಿ ಮಾಡಲಾಗಿತ್ತು. ಅದರೆ ಈವರೆಗೂ ನಿಗಮ ಸ್ಥಾಪನೆಯಾಗಿಲ್ಲ. ಪ್ರಸ್ತುತ ಸಿಎಂ ಸಿದ್ದರಾಮಯ್ಯನವರು ಶೋಷಿತ, ಹಿಂದುಳಿದ ವರ್ಗದ ಧ್ವನಿಯಾಗಿದ್ದು, ಮೇದ ಅಭಿವೃದ್ಧಿ ನಿಗಮ ಸ್ಥಾಪಿಸಲು ಕ್ರಮಕೈಗೊಳ್ಳಬೇಕು. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹಾಗೂ ಶಾಸಕ ಟಿ.ಡಿ.ರಾಜೇಗೌಡ ನಿಗಮದ ಸ್ಥಾಪನೆಗೆ ಒತ್ತಡ ಹಾಕಬೇಕು ಎಂದರು.
ಚಿತ್ರದುರ್ಗ ಬಂಜಾರ ಗುರುಪೀಠದ ಸರದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ವಿಶ್ವಗುರು ಬಸವಣ್ಣನವರ ಸಮಕಾಲಿನರಾದ ಶಿವಶರಣ ಮೇದರ ಕೇತಯ್ಯನವರು ನುಡಿದಂತೆ ನಡೆ ಇದೇ ಜನ್ಮ ಕೊನೆ, ಕಾಯಕವೇ ಕೈಲಾಸ ಎಂದು ಸಾರಿದರು. ಕಾಯಕ ಹಾಗೂ ಬುಡಕಟ್ಟು ಸಮುದಾಯವಾಗಿರುವ ಮೇದ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ ಮೇದರ ಗುರುಪೀಠದ ಕೊಡುಗೆ ಅಪಾರ ಎಂದರು.
ಬೆಂಗಳೂರು ಸರ್ವಧರ್ಮ ಗುರುಪೀಠದ ಶ್ರೀ ಸಂಗಮನಾಥ ಸ್ವಾಮೀಜಿ, ಕರಿಯಮ್ಮ ದೇವಿ, ಅಂತರಘಟ್ಟಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಆರ್.ಪ್ರವೀಣ್ ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರಯ್ಯಬಾನು, ಸದಸ್ಯರಾದ ಪ್ರಶಾಂತ್ ಎಲ್.ಶೆಟ್ಟಿ ಜುಬೇದಾ, ಕೆ.ಅಣ್ಣಪ್ಪ, ಮಾಜಿ ಸದಸ್ಯ ಲಕ್ಷ್ಮಣ್ ಶೆಟ್ಟಿ, ದುರ್ವಿಗೆರೆ ಕೊಲ್ಲಾರೇಶ್ವರಿ ದೇವಿ ಸಮಿತಿ ಅಧ್ಯಕ್ಷ ರಂಗಯ್ಯ ಇದ್ದರು.