

ಮೂಡಿಗೆರೆ: ಬ್ಯಾರಿ ಸಮುದಾಯಕ್ಕೆ ಸರ್ಕಾರದಿಂದ ಯಾವುದೇ ಸವಲತ್ತು ದೊರೆಯುತ್ತಿಲ್ಲ. ಇದರಿಂದ ಸಮುದಾಯ ಹಿಂದುಳಿದಿದ್ದು, ಸಮುದಾಯದ ಅಭಿವೃದ್ಧಿಗಾಗಿ ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ಕೆ.ಮಹಮ್ಮದ್ ಒತ್ತಾಯಿಸಿದರು.
ಜಿಲ್ಲಾ ಬ್ಯಾರಿ ಒಕ್ಕೂಟದಿಂದ ಒಕ್ಕೂಟದ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ನಡೆದ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ಯಾರಿ ಭಾಷೆಗೆ ಪಾಂಡಿತ್ಯವಿದೆ. ವಿವಿಧ ಸಮುದಾಯಗಳನ್ನು ಒಗ್ಗೂಡಿಸುವ ಛಲ ರೂಪಿಸಿಕೊಂಡಿದೆ. 2007ರಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪಿಸಿರುವ ಸರ್ಕಾರ, ಬ್ಯಾರಿ ಸಮುದಾಯಕ್ಕೆ ಅದನ್ನು ಒಪ್ಪಿಸಿದ ದಿನವನ್ನು ಬ್ಯಾರಿ ಭಾಷಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಇದರಿಂದ ಬ್ಯಾರಿ ಭಾಷೆ ಉನ್ನತ ಮಟ್ಟಕ್ಕೇರಲು ಕಾರಣವಾಗಿದೆ ಎಂದರು.
ಜಿಲ್ಲಾ ಬ್ಯಾರಿ ಒಕ್ಕೂಟದ ಉಪಾಧ್ಯಕ್ಷ ಕಿರುಗುಂದ ಅಬ್ಬಾಸ್ ಮಾತನಾಡಿ, ದ್ರಾವಿಡ ಸಂಸ್ಕೃತಿಯನ್ನೊಳಗೊಂಡಿರುವ ಬ್ಯಾರಿ ಭಾಷೆಗೆ 1200 ವರ್ಷದ ಇತಿಹಾಸವಿದೆ. ರಾಜ್ಯದಲ್ಲಿ 30ಲಕ್ಷ ಬ್ಯಾರಿ ಭಾಷೆ ಮಾತನಾಡುವವರಿದ್ದಾರೆ. 16ನೇ ಶತಮಾನದಲ್ಲಿ ಉಳ್ಳಾಲದ ಚೌಟ ವಂಶಕ್ಕೆ ಸೇರಿದ ಅಬ್ಬಕ್ಕ ರಾಣಿಯ ಸೇನೆಯಲ್ಲಿ ಹೆಚ್ಚಿನ ಸಂಖ್ಯೆಯ ಬ್ಯಾರಿ ಸಮುದಾಯದ ಸೈನಿಕರಿದ್ದರು. 40ವರ್ಷ ಪೋರ್ಚುಗೀಸರ ವಿರುದ್ಧ 6 ಬಾರಿ ಯುದ್ದ ನಡೆಸಿ ರಾಣಿ ಅಬ್ಬಕ್ಕ ಅವರನ್ನು ರಕ್ಷಿಸಿದ್ದಾರೆ. ಇಂತಹ ತ್ಯಾಗ ಮಾಡಿರುವ ಬ್ಯಾರಿ ಸಮುದಾಯವನ್ನು ಸರ್ಕಾರ ದೂರವಿಡುವುದು ಸರಿಯಲ್ಲ ಎಂದು ತಿಳಿಸಿದರು.
ಜಿಲ್ಲಾ ಬ್ಯಾರಿ ಒಕ್ಕೂಟದ ಅಧ್ಯಕ್ಷ ಟಿ.ಎಂ. ನಾಸೀರ್ ಇಂಪಾಲ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್, ಮುಖಂಡರಾದ ಸಿ.ಎಸ್.ಖಲಂದರ್, ಅಲ್ತಾಫ್ ರೆಹಮಾನ್, ಮಹಮ್ಮದ್ ರಫೀಕ್, ಬಿ.ಎಂ.ಮಹಮ್ಮದ್, ಫಾರೂಕ್ ಬಣಕಲ್ ಇತರರಿದ್ದರು.