

ಸಂಶಿ: ಬಸ್ಪಾಸ್ ಪಡೆದರೂ ನಮಗೆ ನಿತ್ಯ ಬಸ್ ವ್ಯವಸ್ಥೆ ದೊರೆಯುತ್ತಿಲ್ಲ. ಖಾಸಗಿ ವಾಹನಗಳಿಗೆ ಹಣ ನೀಡಿ ಶಾಲೆ- ಕಾಲೇಜ್ಗಳಿಗೆ ತೆರಳಬೇಕಿದೆ. ಇದು ಕೇವಲ ನಮ್ಮಿಬ್ಬರ ಸಮಸ್ಯೆಯಲ್ಲ. 25-30 ವಿದ್ಯಾರ್ಥಿಗಳ ಗೋಳಾಗಿದೆ ಎಂದು ಹೊಸಳ್ಳಿ ಗ್ರಾಮದ ವೇದಾ ಯರಡ್ಡಿ ಹಾಗೂ ಜ್ಯೋತಿ ಪವಾಡೆಪ್ಪನವರ ಎಂಬ ವಿದ್ಯಾರ್ಥಿನಿಯರು ಬುಧವಾರ ಸಂಶಿಯಲ್ಲಿ ಹುಬ್ಬಳ್ಳಿ- ಗುಂಜಳ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಈ ಮಾರ್ಗವಾಗಿ ನಿತ್ಯ ಓಡಾಡುವ ಬಸ್ ಅಲ್ಲ. ಹೆಚ್ಚುವರಿಯಾಗಿ ಕಳುಹಿಸಿದ್ದಾರೆ. ನಮ್ಮ ನಿಲ್ದಾಣ ಹಂತದ ವರದಿಯಲ್ಲಿ ವಾಯಾ ಹೊಸಳ್ಳಿ ಎಂದು ಬರೆದಿಲ್ಲ ಎಂಬ ಚಾಲಕ ಮತ್ತು ನಿರ್ವಾಹಕರ ಸ್ಪಷ್ಟನೆಗೆ ವಿದ್ಯಾರ್ಥಿನಿಯರು ಪಟ್ಟು ಸಡಿಲಿಸಲಿಲ್ಲ. ಬಂದವರೆಲ್ಲರೂ ಹೀಗೆ ಹೇಳುತ್ತಾರೆ. ಕಾರಣ ಹೇಳಬೇಡಿ, ಹೊಸಳ್ಳಿಗೆ ಬಸ್ ಓಡಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳು ಮತ್ತು ಚಾಲಕ, ನಿರ್ವಾಹಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮೇಲಧಿಕಾರಿಗಳು ಬರುವವರೆಗೂ ಬಸ್ ಸಂಚರಿಸಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುಂದಗೋಳ ಎಎಸ್ಐ ಏಕನಾಥ ಬಳ್ಳಾರಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದರು. ಬಳಿಕ ಪ್ರತಿಕ್ರಿಯಿಸಿದ ಅವರು, ಈ ಕುರಿತು ಹಿರಿಯ ಸಾರಿಗೆ ಅಧಿಕಾಗಳ ಜತೆ ಮಾತನಾಡಿದ್ದೇನೆ ಅವರು ಗುರುವಾರ ಠಾಣೆಗೆ ಬರಲು ತಿಳಿಸಿದ್ದಾರೆ. ಅಲ್ಲದೆ, ನೀವು ಹಾಜರಾಗಬೇಕೆಂದು ವಿದ್ಯಾರ್ಥಿಗಳು, ಗ್ರಾಮಸ್ಥರಿಗೆ ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ವೇಳೆ ರಾಜು ಪುಟ್ಟಣ್ಣವರ, ಎಂ.ಆರ್. ಯಲ್ಲರಡ್ಡಿ, ಶಂಕ್ರಯ್ಯ ಹಿರೇಮಠ, ನಿಜಗುಣಿ ಹರಕುಣಿ, ಗುರು ಕಲ್ಲೂರ, ರೇಣುಕಾ ಪೂಜಾರ ಹಾಗೂ ವಿದ್ಯಾರ್ಥಿಗಳು ಇದ್ದರು.
EndFragment