ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ : ಸವಣೂರಿಗೆ ಕಾಯಂ ಪಿಡಿಒ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ

samnya sabhe
Published on

ವಿಜಯವಾಣಿ ಸುದ್ದಿಜಾಲ ಕಡಬ

ಸವಣೂರು ಗ್ರಾ.ಪಂ.ಗೆ ಕಾಯಂ ಪಿಡಿಒ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯಿಸಿ ಸವಣೂರು ಗ್ರಾ.ಪಂ.ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಇಂದು ಪ್ರತಿಭಟಿಸಲಾಯಿತು.

ಪಿಡಿಒ ವಾರದಲ್ಲಿ ಮೂರು ದಿನ ಇದ್ದು ಕಾಯಂ ಪಿಡಿಒ, ಕಾರ್ಯದರ್ಶಿಯನ್ನು ಸೆ.10ರೊಳಗೆ ನೇಮಕ ಮಾಡಬೇಕು.ಇಲ್ಲದಿದ್ದಲ್ಲಿ ಗ್ರಾ.ಪಂ. ಸದಸ್ಯರೇ ಪ್ರತಿಭಟನೆ ಮಾಡುತ್ತೇವೆ ಅಲ್ಲದೇ ಸಾಮಾನ್ಯ ಸಭೆಯನ್ನೂ ಬಹಿಷ್ಕರಿಸುತ್ತೇವೆ ಎಂದು ಆಗಸ್ಟ್ ತಿಂಗಳ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು.

ಆದರೆ 18ರ ವರೆಗೆ ನೇಮಕಾತಿಯಾಗದ ಹಿನ್ನೆಲೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್,ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಗಿರಿಶಂಕರ ಸುಲಾಯ, ಚೆನ್ನು ಮುಂಡೋತಡ್ಕ, ಸತೀಶ್ ಅಂಗಡಿಮೂಲೆ, ಎಂ.ಎ.ರಫೀಕ್, ರಾಜೀವಿ ಶೆಟ್ಟಿ, ಭರತ್ ರೈ, ತಾರಾನಾಥ ಬೊಳಿಯಾಲ, ಶೀನಪ್ಪ ಶೆಟ್ಟಿ ನೆಕ್ರಾಜೆ, ಚಂದ್ರಾವತಿ ಸುಣ್ಣಾಜೆ, ಹರೀಶ್ ಕೆ., ಚೇತನಾ ಪಾಲ್ತಾಡಿ, ವಿನೋದಾ ರೈ, ಹರಿಕಲಾ ರೈ, ಯಶೋಧಾ, ಶಬೀನಾ, ಇಂದಿರಾ ಬೇರಿಕೆ, ತೀರ್ಥರಾಮ ಕೆಡೆಂಜಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸಂದೇಶ್ ಕೆ.ಎನ್ ಸ್ವಾಗತಿಸಿದರು. ಸಿಬ್ಬಂದಿ ಪ್ರಮೋದ್ ಕುಮಾರ್ ರೈ ವಂದಿಸಿದರು. ಸಿಬ್ಬಂದಿ ದಯಾನಂದ ಮಾಲೆತ್ತಾರು, ಜಯಶ್ರೀ, ಜಯಾ ಕೆ., ಶಾರದಾ ಮಾಲೆತ್ತಾರು, ಯತೀಶ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ನೇಮಕ ಆದೇಶ

ಪ್ರತಿಭಟನೆ ನಡೆಯುತ್ತಿದ್ದಾಗಲೇ ಸವಣೂರು ಗ್ರಾ.ಪಂ.ನಲ್ಲಿ ಮೂರು ದಿನ ಕಾರ್ಯ ನಿರ್ವಹಿಸುವಂತೆ ಆಲಂಕಾರು ಗ್ರಾ.ಪಂ.ಕಾರ್ಯದರ್ಶಿ ವಸಂತ ಶೆಟ್ಟಿ ಅವರನ್ನು ನಿಯೋಜನೆ ಮಾಡಿ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಅವರು ಆದೇಶ ಹೊರಡಿಸಿದ್ದು, ವಸಂತ ಶೆಟ್ಟಿ ಅವರು ಆಗಮಿಸಿದ ಬಳಿಕ ಸಭೆ ಮುಂದುವರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net