ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯ

7CHNR3
Published on

ಚಾಮರಾಜನಗರ: ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ನಗರದಲ್ಲಿ ಮಂಗಳವಾರ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಗುಂಪುಗೂಡಿದ ಪ್ರತಿಭಟನಾಕಾರರು ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿ ಆವರಣದಲ್ಲಿ ಜಮಾಯಿಸಿ ನಿಗಮ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಚಟುವಟಿಕೆಗಳನ್ನು ನಡೆಸಲು ನಿರಂತರ ವಿದ್ಯುತ್ ಸರಬರಾಜು ಆಗದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಬೆಳೆಯಲು, ಜಾನುವಾರುಗಳನ್ನು ಸಾಕಲು ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ಕುಡಿಯಲು ನೀರು ದೊರೆಯುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಉಮ್ಮತ್ತೂರಿನಲ್ಲಿ ನೂತನ ವಿದ್ಯುತ್ ಪೂರೈಕೆ ಘಟಕ ಸ್ಥಾಪನೆ ಮಾಡಿ ಚಾಲನೆ ನೀಡದೆ ನಿರುಪಯುಕ್ತಗೊಳಿಸಲಾಗಿದೆ ಎಂದು ಕಿಡಿಕಾರಿದರು.

ಪ್ರತಿದಿನ ನಿಗದಿಪಡಿಸಿದಂತೆ 7 ಗಂಟೆಗಳ ಕಾಲ ವಿದ್ಯುತ್ ಅನ್ನು ಪೂರೈಕೆ ಮಾಡಬೇಕು. ನವಿಲೂರು ವ್ಯಾಪ್ತಿಯ ನಿಗಮದ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಮರ್ಪಕವಾಗಿ ವಿದ್ಯುತ್ ನೀಡದ ಸೆಸ್ಕ್ ಅಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಉತ್ತರ ನೀಡುವವರೆಗೂ ಸ್ಥಳದಿಂದ ಕದಲದಿರಲು ಪ್ರತಿಭಟನಾಕಾರರು ತೀರ್ಮಾನಿಸಿದರು. ಎಇಇ ಅಬ್ದುಲ್‌ವಾಜೀದ್‌ಖಾನ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಅಹವಾಲು ಸ್ವೀಕರಿಸಲು ಮುಂದಾದರು. ಇದಕ್ಕೆ ಒಪ್ಪದ ರೈತರು ಅಧಿಕಾರಿಗಳಿಂದ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವುದಾಗಿ ಪತ್ರ ಬರೆಸಿಕೊಂಡು ನಂತರ ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭಾಗ್ಯರಾಜ್, ಮುಖಂಡರಾದ ಮೂಕಳ್ಳಿ ಮಹದೇವಸ್ವಾಮಿ, ಪಾಪಣ್ಣ, ಚಿಕ್ಕಮಲ್ಲಪ್ಪ, ಮೂಡ್ಲುಪುರ ಶಿವಮೂರ್ತಿ, ನಾಗೇಶ್, ಚಿಕ್ಕಮಲ್ಲಪ್ಪ, ಹಳ್ಳಿಕೆರೆಹುಂಡಿ ಮಧು, ನಾಗಣ್ಣ, ವಿಜಯೇಂದ್ರ, ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net