

ಜಗಳೂರು: ಜ್ಞಾನ ಮತ್ತು ಶಿಕ್ಷಣ ಪಡೆದು ಉತ್ತಮ ಸಾಧನೆ ಮಾಡಬಹುದು ಎಂದು ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಜೆ.ಬಿ. ವಿನಯ ಕುಮಾರ್ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಶುಕ್ರವಾರ ಸಮಾನ ಮನಸ್ಕರ ಬಳಗದಿಂದ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ, ರಾಷ್ಟ್ರೀಯ ಯುವಜನೋತ್ಸವ ಹಾಗೂ ಹುತಾತ್ಮರ ದಿನಾಚರಣೆ ಹಿನ್ನೆಲೆ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಜಾತಿವ್ಯವಸ್ಥೆ, ನಿಂದನೆ, ಅವಮಾನಗಳ ಜತೆ ಕಷ್ಟದ ಜೀವನ ನಡೆಸಿ ಜ್ಞಾನ ಮತ್ತು ಶಿಕ್ಷಣ ಪಡೆದು ಭಾರತ ಸಂವಿಧಾನ ಬರೆದರು. ಹಾಗಾಗಿ ಜೀವನದಲ್ಲಿ ಎಷ್ಟೇ ಕಷ್ಟ ಎದುರಾದರೂ ನಿರ್ದಿಷ್ಟ ಗುರಿ ತಲುಪಬೇಕು ಎಂದರು.
ಐಎಎಸ್ ಮತ್ತು ಕೆಎಎಸ್ ಓದುವ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುವುದು. ಶಿಕ್ಷಣದಿಂದ ಎಲ್ಲ ಸಾಧನೆಯೂ ಸಾಧ್ಯ ಎಂದು ತಿಳಿಸಿದರು.
ಡಾ.ಟಿ.ಜಿ. ರವಿಕುಮಾರ್ ಮಾತನಾಡಿ, ಸ್ವಾತಂತ್ರ್ಯ್ಕಾಗಿ ಹೋರಾಟಕ್ಕೆ ಧುಮುಕಿದ ಸುಭಾಷ್ ಚಂದ್ರ ಬೋಸ್ ಅವರಿಗೆ ಸ್ಪೂರ್ತಿ ಸ್ವಾಮಿ ವಿವೇಕಾನಂದರು ಎಂದರು.
ರಕ್ತ ಕೇಂದ್ರ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಡಿ. ಎಚ್. ಗೀತಾ ಮಾತನಾಡಿದರು.
ಸಮಾನ ಮನಸ್ಕರ ಬಳಗದ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಪ್ರಾಂಶುಪಾಲ ನಾಗಲಿಂಗಪ್ಪ, ಪಪಂ ಅಧ್ಯಕ್ಷ ನವೀನ್ ಕುಮಾರ್, ರವಿ ಯು.ಸಿ. ಹುಚ್ಚಂಗಿಪುರ, ಮಹಾಲಿಂಗಪ್ಪ ಎಚ್.ಎಂ. ಹೊಳೆ, ಸತೀಶ್. ಬಿ. ಮಲೆಮಚಿಕೆರೆ, ಅನಂತ್ ರಾಜ್, ಬರ್ಕತ್ ಅಲಿ, ಗುತ್ತಿದುರ್ಗ ರುದ್ರೇಶ್, ಗೌರಿಪುರ ಕುಬೇಂದ್ರಪ್ಪ, ಭೈರಗೊಂಡನಹಳ್ಳಿ ರಾಜು ಇತರರಿದ್ದರು.