

ಹುಬ್ಬಳ್ಳಿ: ಭಾರತದ ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡಲಾಗಿದೆ. ಇದರ ಪರಿಣಾಮ ಅಪಘಾತ ಸಂಖ್ಯೆ ಹೆಚ್ಚಿತ್ತಿದೆ. ಪ್ರಯಾಣಿಕರು ಹಾಗೂ ನೌಕರರಲ್ಲಿಯೂ ಅಸುರಕ್ಷತೆ ಭಾವ ಮನೆ ಮಾಡಿದೆ ಎಂದು ಸಿಐಟಿಯು ಅಖಿಲ ಭಾರತ ಅಧ್ಯಕ್ಷೆ ಡಾ.ಕೆ. ಹೇಮಲತಾ ಅಭಿಪ್ರಾಯಪಟ್ಟರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ವತಿಯಿಂದ ಇಲ್ಲಿಯ ಜೆ.ಸಿ. ನಗರದ ಅಕ್ಕನ ಬಳಗದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ರೈಲ್ವೆ ಸುರಕ್ಷತೆ ರಾಜ್ಯ ಮಟ್ಟದ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
2017ರಿಂದ 2022ರವರೆಗೆ ರೈಲ್ವೆ ಸಂಬಂಧಿತ ಅಪಘಾತಗಳ್ಲಿ 451 ಹಳಿ ನಿರ್ವಹಣಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿ ವರ್ಷವೂ ರೈಲ್ವೆ ಅಪಘಾತ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದೇ ವಿಷಯ ಇಟ್ಟುಕೊಂಡು ಜನರಲ್ಲಿ ಜಾಗೃತಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹ, ಸಿಬ್ಬಂದಿಗೆ ಸುರಕ್ಷತೆ ಒದಗಿಸಲು ಸಮಾವೇಶ ನಡೆಸಲಾಗುತ್ತಿದೆ ಎಂದರು.
ಸಿಐಟಿಯು ಕರ್ನಾಟಕ ಅಧ್ಯಕ್ಷೆ ಎಸ್. ವರಲಕ್ಷ್ಮೀ ಮಾತನಾಡಿ, ಉದಾರಿಕರಣದ ಕರಿ ನೆರಳು ರೈಲ್ವೆ ಮೇಲೆ ಬಿದ್ದಿದೆ. ದೇಶಭಕ್ತಿಯ ಬಗ್ಗೆ ಮಾತನಾಡುವವರು ರೈಲ್ವೆ ಅಪಘಾತದಿಂದ ಕಾಡುತ್ತಿರುವ ಅಸುರಕ್ಷತೆ ಕುರಿತು ಮಾತನಾಡುತ್ತಿಲ್ಲ. ಪ್ರದೇಶ, ಸಂಸ್ಕೃತಿ ಬೆಸೆಯುವ ರೈಲ್ವೆ ಇಲಾಖೆಯ ನಿಷ್ಕಾಳಜಿ ಹೆಚ್ಚುತ್ತಿದೆ. ಉದ್ಯೋಗಸ್ಥರು ನಿಗದಿತ ಸಮಯಕ್ಕಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಸುರಕ್ಷತೆ ಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು ಎಂದು ಅಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಡಾ. ಮೀನಾಕ್ಷಿ ಸುಂದರಂ ಮಾತನಾಡಿ, ಜಿಲ್ಲೆ, ಪ್ರಮುಖ ರೈಲ್ವೆ ನಿಲ್ದಾಣ, ರೈಲ್ವೆ ವಿಭಾಗ ಮಟ್ಟದ ಸಮಾವೇಶಗಳನ್ನು ಜುಲೈ ಮತ್ತು ಆಗಷ್ಟ್ ತಿಂಗಳಲ್ಲಿ ನಡೆಸಲಾಗುವುದು. ನಂತರ ಸಾರ್ವಜನಿಕರ ಸಹಿ ಸಂಗ್ರಹ ಚಳವಳಿ ನಡೆಸಿ ಪ್ರಧಾನ ಮಂತ್ರಿಗಳಿಗೆ ರವಾನಿಸಲಾಗುವುದು. ಅಕ್ಟೋಬರ್ 2ರೊಳಗೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಸಿಐಟಿಯು ಕರ್ನಾಟಕ ಉಪಾಧ್ಯಕ್ಷ ವಿಜೆಕೆ ನಾಯರ್, ಕೆ. ಮಹಾಂತೇಶ, ಎಐಎಲ್‌ಆರ್‌ಎಸ್‌ಎ ಪ್ರಧಾನ ಕಾರ್ಯದರ್ಶಿ ಕೆ.ಸಿ. ಜೇಮ್ಸ್, ಎಐಜಿಸಿ ಕಾರ್ಯದರ್ಶಿ ಎ.ಕೆ. ದುಭೆ, ಎ.ವಿ. ಕಾಂತರಾಜು, ಬಿ.ಐ. ಈಳಿಗೇರ, ಮಹೇಶ ಪತ್ತಾರ, ಗುರುಸಿದ್ದಪ್ಪ ಅಂಬಿಗೇರ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಇತರರು ಇದ್ದರು.