ತುಮಕೂರು ಜಿಲ್ಲೆಯಲ್ಲಿ ರಾಗಿಗೆ ಬೆಂಕಿರೋಗದ ಬಾಧೆ

02Tmk_Benki_Roga_01
Published on

ತುಮಕೂರು: ಪ್ರಸಕ್ತ ವರ್ಷ ವಾಡಿಕೆಗಿಂತ ಉತ್ತಮ ಮಳೆಯಾಗಿದ್ದು ಜಿಲ್ಲೆಯಾದ್ಯಂತ ನಿರೀಕ್ಷೆಗಿಂತ ಹೆಚ್ಚು ರಾಗಿ ಬಿತ್ತನೆ ಮಾಡಲಾಗಿದೆ. ಆದರೆ, ಕೆಲವು ಕಡೆ ರಾಗಿಗೆ ಕಾಣಿಸಿಕೊಂಡಿರುವ ‘ಬೆಂಕಿರೋಗ’ವು ರೈತರನ್ನು ಕಂಗಾಲಾಗಿಸಿದೆ.

ಈ ಬಾರಿ ಕರೊನಾ ಎಫೆಕ್ಟ್‌ನಿಂದ ಕೃಷಿಯತ್ತ ಜನ ಮುಖಮಾಡಿದ್ದಾರೆ. ಪಾಳುಬಿದ್ದಿದ್ದ ಜಮೀನುಗಳಲ್ಲೂ ಕೃಷಿಚಟುವಟಿಕೆಗಳನ್ನು ಕಾಣುವಂತಾಗಿದೆ. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಮಳೆ ಆಶ್ರಿತ ರಾಗಿ ಬಿತ್ತನೆಯನ್ನು ಹೆಚ್ಚು ಮಾಡಲಾಗಿದೆ. 1.50ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿಹೊಂದಲಾಗಿದ್ದು 1,49,386 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

ರಾಗಿಗೆ ಬೆಂಕಿರೋಗ !: ಜಿಲ್ಲೆಯಾದ್ಯಂತ ಶೇ.99.59 ಪ್ರಮಾಣದಲ್ಲಿ ರಾಗಿ ಬಿತ್ತನೆಯಾಗಿದ್ದು ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ರೈತರಿಗೆ ಸಹಜವಾಗಿ ಈಗ ಬೆಂಕಿರೋಗದ ಆತಂಕ ಕಾಡಲಾರಂಭಿಸಿದೆ. ಅದರಲ್ಲೂ ತುಮಕೂರು ತಾಲೂಕು ಹಾಗೂ ತಿಪಟೂರು ತಾಲೂಕುಗಳಲ್ಲಿ ಈ ರೋಗ ಹೆಚ್ಚು ಕಾಣಿಸಿಕೊಂಡಿದೆ. ರೋಗವು ಸ್ಥಳೀಯ ತಳಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು ಕೃಷಿ ಇಲಾಖೆ ವಿತರಿಸಿರುವ ಎಂಆರ್-6, ಎಂಎಲ್-365 ಹಾಗೂ ಜಿಪಿಯು-28 ತಳಿಗಳಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಈ ತಳಿಗಳಲ್ಲಿ ರೋಗನಿರೋಧಕ ಶಕ್ತಿ ಇರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಸ್ಥಳೀಯ ತಳಿಗಳಾದ ಸಣ್ಣರಾಗಿ, ದೊಡ್ಡರಾಗಿ, ಕಡ್ಡಿರಾಗಿ, ಕಪ್ಪುರಾಗಿ, ಕೆಂಪುರಾಗಿಯಲ್ಲಿ ಬೆಂಕಿರೋಗ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಎಷ್ಟು ಎಕರೆ ಪ್ರದೇಶದಲ್ಲಿ ಬೆಂಕಿರೋಗ ರಾಗಿಗೆ ತಗುಲಿದೆ ಎಂಬುದನ್ನು ಇನ್ನೂ ಅಂದಾಜಿಸಲಾಗಿಲ್ಲ.

ರೈತರಿಗೆ ಮಾಹಿತಿ ಕೊರತೆ: ಬೆಂಕಿರೋಗದ ಬಗ್ಗೆ ರೈತರಿಗೆ ಮಾಹಿತಿ ಕೊರತೆ ಇದ್ದು ರೋಗ ನಿಯಂತ್ರಣಕ್ಕೆ ರೈತರು ಪರದಾಡುವಂತಾಗಿದೆ. ಪ್ರತಿವರ್ಷ ಬಿತ್ತನೆ ಸಂದರ್ಭದಲ್ಲಿ ಯಾವುದೇ ರೋಗಗಳು ಕಾಣಿಸಿಕೊಂಡಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಹಳ್ಳಿ, ಹಳ್ಳಿಗಳಿಗೆ ತೆರಳಿ ಮಾಹಿತಿ ನೀಡುವುದಲ್ಲದೆ, ಕೀಟನಾಶಕಗಳನ್ನು ನೀಡುವ ಮೂಲಕ ರೋಗನಿಯಂತ್ರಣಕ್ಕೆ ನೆರವಾಗುತ್ತಿದ್ದರು. ಈ ಬಾರಿ ಬೆಳೆವಿಮೆ ಸಮೀಕ್ಷೆಯಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಸಂಪೂರ್ಣವಾಗಿ ತೊಡಗಿಕೊಂಡಿರುವುದರಿಂದ ರೈತರಿಗೆ ಮಾಹಿತಿ ನೀಡುವವರೇ ಇಲ್ಲವಾಗಿದೆ.

ಏನಿದು ಬೆಂಕಿರೋಗ ?: ಗರಿಗಳ ಮೇಲೆ ಕಂದುಬಣ್ಣದ ವಜ್ರಾಕಾರದ ಚುಕ್ಕೆಗಳು ಕಾಣಿಸಿಕೊಂಡು ಅವುಗಳು ಒಂದಕ್ಕೊಂದು ಸೇರಿ ಎಲೆಗಳು ಒಣಗುತ್ತವೆ. ಇಲುಕಿನ ಮೇಲೆ ಕಪ್ಪುಚುಕ್ಕೆ ಕಾಣಿಸಿಕೊಂಡು ತೆನೆ ಇಲುಕು ಒಣಗುತ್ತವೆ. ಹಾಗಾಗಿ, ಇದಕ್ಕೆ ಬೆಂಕಿರೋಗ ಅಥವಾ ಇಲುಕುರೋಗ ಎನ್ನಲಾಗುತ್ತದೆ. ಮೋಡ ಕವಿದ ವಾತಾವರಣದಲ್ಲಿ ಫಂಗಸ್ ಆಗಿ ಈ ರೋಗ ಉಲ್ಬಣಗೊಳ್ಳುತ್ತದೆ. ಬಿಸಿಲಿನ ವಾತಾವರಣದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ರೋಗ ನಿಯಂತ್ರಣಕ್ಕೆ ಮದ್ದು : ಸಸಿ ಮಡಿಯಲ್ಲಿ ಬಿತ್ತನೆ ಮಾಡಿದ 15ದಿನಗಳ ನಂತರ, ನಾಟಿ ಮಾಡಿದ 20, 40ನೇ ದಿನಗಳಲ್ಲಿ ಹಾಗೂ ಶೇ.50 ತೆನೆಬಂದಾಗ ಮ್ಯಾಂಕೋಜೆಬ್/ಕಾರ್ಬೆಂಡಿಜೆಮ್/ಎಡಿಪೆನ್‌ಫಾಸ್ / ಜೆನೆಬ್ ಅನ್ನು 1 ಲೀಟರ್‌ಗೆ ಇಂತಿಷ್ಟು ಪ್ರಮಾಣದಂತೆ ಬೆರೆಸಿ ಸಿಂಪಡಿಸಬೇಕು. ಅಲ್ಲದೆ, ಗರಿಮೇಯಿಸುವುದರಿಂದ ಹೆಚ್ಚಿನ ಪ್ರದೇಶದಲ್ಲಿ ಬೆಂಕಿರೋಗ ಹಾವಳಿ ತಡೆಗಟ್ಟುಬಹುದಾಗಿದೆ.

ನಮ್ಮ ರಾಗಿ ಹೊಲದಲ್ಲಿ ಬೆಂಕಿರೋಗ ಕಾಣಿಸಿಕೊಂಡಿದೆ. ನಮ್ಮ ಸುತ್ತಮುತ್ತ ಹಳ್ಳಿಗಳಲ್ಲೂ ಇದೇರೀತಿ ರೋಗ ಕಂಡುಬಂದಿದೆ. ರೋಗ ನಿಯಂತ್ರಣ ಬಗ್ಗೆ ಮಾಹಿತಿ ಪಡೆಯಲು ಕೃಷಿ ಅಧಿಕಾರಿಗಳು ಸಿಗುತ್ತಿಲ್ಲ. ಪ್ರತಿವರ್ಷ ಕೃಷಿ ಚಟುವಟಿಕೆ ಸಂದರ್ಭದಲ್ಲಿ ರೋಗಗಳ ಬಗ್ಗೆ ರಸಗೊಬ್ಬರ ಬಳಸುವ ಬಗ್ಗೆ ಕೃಷಿ ಜಾಗೃತಿ ಮೂಡಿಸಲಾಗುತ್ತಿತ್ತು. ರಮೇಶ್ ನೆಲಹಾಳ್ ಸ್ಥಳೀಯ ತಳಿಗಳಲ್ಲಿ ಬೆಂಕಿರೋಗ ಕಾಣಿಸಿಕೊಂಡಿದೆ. ಕೃಷಿ ಇಲಾಖೆ ನೀಡಿದ್ದ ಮಾದರಿ ತಳಿಗಳಲ್ಲಿ ರೋಗ ನಿರೋಧಕ ಶಕ್ತಿಯಿದ್ದು ಈ ರೋಗ ಕಾಣಿಸಿಕೊಂಡಿಲ್ಲ. ಕೃಷಿ ಇಲಾಖೆ ಸಿಬ್ಬಂದಿ ಬೆಳೆವಿಮೆ ಸಮೀಕ್ಷೆಯಲ್ಲಿ ತೊಡಗಿಕೊಂಡಿದ್ದು ಬೆಂಕಿರೋಗ ನಿಯಂತ್ರಣ ಬಗ್ಗೆ ಆದಷ್ಟು ಕ್ರಮವಹಿಸುವುದಲ್ಲದೆ, ಜಾಗೃತಿ ಮೂಡಿಸಲಾಗುವುದು. ಡಿ.ಉಮೇಶ್ ಉಪನಿರ್ದೇಶಕ, ಕೃಷಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net