

ಗಂಗಾವತಿ: ತಾಲೂಕಿನ ಸಣಾಪುರದಲ್ಲಿ ಆನೆಗೊಂದಿ ನರಪತಿ ಸಂಸ್ಥಾನದ ರಾಣಿ ಕುಪ್ಪಮ್ಮಳ ಶಾಸನ ಪತ್ತೆಯಾಗಿದ್ದು, ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ನೇತೃತ್ವದ ತಂಡ ಬೆಳಕಿಗೆ ತಂದಿದೆ.
ಸಣಾಪುರ ತುಂಗಭದ್ರಾ ಜಲಾಶಯದ ಎಡತೀರದ ಮೇಲಿನ ಗಂಗಾಪರಮೇಶ್ವರಿ ದೇವಾಲಯದಲ್ಲಿ ಕಂಡು ಬಂದಿರುವ ಶಾಸನದಲ್ಲಿ 12 ಸಾಲುಗಳಿದ್ದು, 1309 ಸಲಿ ವರ್ಷದ ಉಲ್ಲೇಖವಿದ್ದು, ಕಿ.ಶ. 1899ಕ್ಕೆ ಸರಿ ಹೊಂದುತ್ತಿದೆ. ಇದು ರಾಣಿ ಕುಪ್ಪಮ್ಮನವರ ಅಭಿಪ್ರಾಯದಂತೆ ಶ್ರೀರಂಗದೇವರಾಯರ ಅಪ್ಪಣೆಯಂತೆ ಅವರ ಆಪ್ತ ಕಾರ್ಯದರ್ಶಿ ನಂದ್ಯಾಲ್ ನಾರಾಯಣ ರಾಜರು, ಶಾಸನವಿರುವ ದೇವಾಲಯವನ್ನು ಕಟ್ಟಿಸಿದ ವಿಷಯ ತಿಳಿಸುತ್ತದೆ.
ಆನೆಗೊಂದಿ ನರಪತಿ ಸಂಸ್ಥಾನದ ಧೀಮಂತ ರಾಣಿಯಾಗಿದ್ದ ರಾಣಿ ಕುಪ್ಪಮ್ಮ, ತನ್ನ ಗಂಡ ಕಷ್ಣದೇವರಾಯನ ಅಕಾಲಿಕ ಮರಣ ನಂತರ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಬ್ರಿಟೀಷರ ನೀತಿ ಧಿಕ್ಕರಿಸಿ ಸಂಸ್ಥಾನವನ್ನು ಉಳಿಸಿಕೊಳ್ಳಲು ತನ್ನ ತಮ್ಮ ಪಂಪಾಪತಿರಾಜುವನ್ನು ದತ್ತು ಪಡೆದು ಶ್ರೀರಂಗದೇವರಾಯನೆಂದು ನಾಮಕರಣ ಮಾಡಿ ಪಟ್ಟಕ್ಕೆ ಕೂಡಿಸಿದಳು. ಅಲ್ಪವಯಸ್ಕನಾಗಿದ್ದ ಮಗನ ಪರ ತಾನೇ ಆಡಳಿತ ನಡೆಸಿದಳು. ಜನಾನುರಾಗಿದ್ದ ಈಕೆ ಹಲವು ದಾನ ಧರ್ಮಗಳನ್ನು ಮಾಡಿದ್ದಾಳೆ ಎಂಬುದನ್ನು ಶಾಸನ ಹೇಳುತ್ತದೆ.
ಈ ಬಗ್ಗೆ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಮಾತನಾಡಿ, ರಾಣಿಯ ಹಲವು ಶಾಸನಗಳು ದೊರೆತಿದ್ದು, ಅವು ವಾಲ್ಮೀಕಿ ಜನಾಂಗದ ಗುರುತ್ವ ಧಾರಣೆ ವಹಿಸಿಕೊಂಡ, ಕಂಪ್ಲಿ ಕಲ್ಮಠಕ್ಕೆ ಹಂಪಿಯಲ್ಲಿ ದಾಸೋಹಕ್ಕಾಗಿ ಮಂಟಪವೊಂದು ದಾನ ನೀಡಿದ ಬಗ್ಗೆ ತಿಳಿಸುತ್ತಿವೆ. ಪ್ರಸ್ತುತ ಶಾಸನ ದೇವಾಲಯ ನಿರ್ಮಾಣದ ಬಗ್ಗೆ ತಿಳಿಸುವುದರ ಮೂಲಕ ರಾಣಿಯ ಕಾರ್ಯ ಚಟುವಟಿಕೆ ಮತ್ತಷ್ಟು ತಿಳಿಯಲು ಸಹಾಯಕವಾಗಿದೆ. ಶಾಸನ ಶೋಧನೆಯಲ್ಲಿ ಆನೆಗುಂದಿಯ ಸತ್ಯರಾಜು, ಚಾರಣ ಬಳಗದ ಮಂಜುನಾಥ್ ಗುಡ್ಲಾನೂರ ಹಾಗೂ ಎಸ್‌ಕೆಎನ್‌ಜಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಜರಂಗಬಲಿ ಗೌಡಪ್ಪನೂರ್ ನೆರವಾಗಿದ್ದಾರೆ ಎಂದರು.