ಎಲ್ಲೂರಲ್ಲಿ ಕೃಷ್ಣದೇವರಾಯನ ಶಾಸನ ಪತ್ತೆ

webbb 1
Published on

ಪಡುಬಿದ್ರಿ: ಕಾಪು ತಾಲೂಕಿನ ಎಲ್ಲೂರು ಶ್ರೀ ಮಹಾತೋಭಾರ ವಿಶ್ವೇಶ್ವರ ದೇವಾಲಯದಲ್ಲಿ ಜೀರ್ಣೋದ್ಧಾರದ ಸಂದರ್ಭ ಪತ್ತೆಯಾಗಿರುವ ಶಾಸನ ಕ್ರಿ.ಶ. 1509ರ ಕೃಷ್ಣದೇವರಾಯನ ಶಾಸನ ಎಂದು ಇತಿಹಾಸಕಾರರು ಖಚಿತಪಡಿಸಿದ್ದಾರೆ

ಈ ಶಾಸನವನ್ನು ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕ ಪ್ರೊ.ಎಸ್.ಎ. ಕೃಷ್ಣಯ್ಯ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿರುತ್ತಾರೆ.

ಕಣಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನದಲ್ಲಿ 12 ಸಾಲುಗಳಿದ್ದು, 2 ಅಡಿ ಎತ್ತರ ಮತ್ತು ಅಗಲವನ್ನು ಹೊಂದಿದೆ. ಶಾಸನದಲ್ಲಿ ಶಾಲಿವಾಹನ ಶಕ ವರುಷ 1434 ನಂದನದ ವರ್ತಮಾನ್ ಸಂವತ್ಸರದ ಜೇಷ್ಠ ಬ 2 ಮಂಗಳವಾರ ಎಂದು ಉಲ್ಲೇಖಿಸಿದೆ. ಈ ಶಾಸನವನ್ನು ಕೃಷ್ಣರಾಯರ ನಿರೂಪದಿಂದ ಮಂಗಲೂರು ಬಾರಕೂರ ರತ್ನಪ್ಪ ಒಡೆಯ ಆಳುವನ ತಿರುಮಲ್ರಾಯ ಚೌಟರು ಮತ್ತು ತಿರುಮಲರಸರಾದ ಕಿಂನಿಕ್ ಹೆಗಡೆಯವರು ದೇವರಾಡಿಯ ಕುಂದ್ ಹೆಗ್ಗಡೆಗೆ ಎಲ್ಲೂರ ಶ್ರೀ ವಿಶ್ವನಾಥ ದೇವರ ಸನ್ನಿಧಿಯಲ್ಲಿ ಬರೆಸಿಕೊಟ್ಟದ್ದಾಗಿದೆ. ಶಾಸನದಲ್ಲಿ ತಿಮ್ಮಯ್ಯ ದಂಡನಾಯಕ ಹಾಗೂ ಪುತ್ತಿಗೆ, ಐಕಳ ಮತ್ತು ಎಲ್ಲೂರು ಪ್ರದೇಶಗಳ ಉಲ್ಲೇಖವಿದೆ.
ಕ್ಷೇತ್ರ ಕಾರ್ಯ ಶೋಧನೆಯಲ್ಲಿ ಕೆ.ಎಲ್. ಕುಂಡಂತಾಯ, ರವಿ ಆಳ್ವ ಬಿಳಿಯಾರು, ಗೌತಮ್ ಕಾಮತ್ ಮೂಡುಬೆಳ್ಳೆ ಸಹಕರಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net