

ಶಿರಾಳಕೊಪ್ಪ: ಸಮೀಪದ ಶಿವಪುರ (ಶಿವಳ್ಳಿ) ಗ್ರಾಮದಲ್ಲಿ ಕೆಳದಿ ಅರಸ ಸೋಮಶೇಖರ ನಾಯಕ ಅವಧಿಯ ಶಾಸನವನ್ನು ಹಿರೇಜಂಬೂರ ಗ್ರಾಮದ ಇತಿಹಾಸ ಸಂಶೋಧಕ ರಮೇಶ್ ಬಿ.ಹಿರೇಜಂಬೂರು ಪತ್ತ ಮಾಡಿದ್ದಾರೆ.
ಇತಿಹಾಸ ಪ್ರಸಿದ್ಧ ವರದಾಂಜನೇಯ ದೇವಾಲಯ ಅಲ್ಲಮಪ್ರಭುಗಳ ಗದ್ದುಗೆ ಬಳಿ ದೊರಕಿರುವ ಶಾಸನ 14 ಸಾಲುಗಳ ಪಾಠವನ್ನು ಹೊಂದಿದೆ. ಶಾಸನ 60 ಸೆಂ.ಮೀ. ಎತ್ತರ ಹಾಗೂ 40 ಸೆಂ.ಮೀ. ಅಗಲವಾಗಿದೆ.
ಪ್ಲವ ನಾಮ ಸಂವತ್ಸರದಲ್ಲಿ ಕೆಳದಿಯ ಮಂತ್ರಿ ಹಾಗೂ ಇಮ್ಮಡಿ ಸೋಮಶೇಖರ ನಾಯಕ ಅವರ ಮಾವ ನಿರ್ವಾಣಯ್ಯ ಶಿವಪುರ ಗ್ರಾಮದಲ್ಲಿ ಪುರಾಣದ ಬಸವಲಿಂಗಪ್ಪ ಅವರ ಶಿಷ್ಯ ಮಹಾಂತ ದೇವರ ಸ್ವತಂತ್ರ ಮಠ ಧರ್ಮದ ಸ್ವಾಸ್ತೆಗೆ ನಿರೂಪ ನೀಡಬೇಕೆಂದು ಭಿನ್ನಹ ಮಾಡಿಕೊಂಡನು. ಅವನ ವಿನಂತಿ ಮೇರೆಗೆ ಇಮ್ಮಡಿ ಸೋಮಶೇಖರ ನಾಯಕ ಶಿವಪುರದ ಬಳಿ 24 ವರಹನ ಭೂಮಿ ದಾನ ನೀಡಿ, ಆ ಕುರಿತಾದ ಉತ್ತಾರವನ್ನು ಉಳಿಗದ ಚೆನ್ನಮಲ್ಲನ ಮೂಲಕ ಬಸವಲಿಂಗಪ್ಪ ಅವರಿಗೆ ಶಿವಾರ್ಪಣೆ ಮಾಡಲಾಯಿತು.
ಜತೆಗೆ ಸುತ್ತಲಿನ 4 ಗ್ರಾಮಗಳ ಮುಖಂಡರನ್ನು ಕರೆಸಿ ಗಡಿ ತಕರಾರು ಬರದಂತೆ ಅಳತೆ ಮಾಡಿ ಗಡಿಕಲ್ಲುಗಳಲ್ಲಿ ಲಿಂಗಮುದ್ರೆ ಕಲ್ಲು ನೆಟ್ಟು, ಈ ಭೂ ದಾನದ ಮಾಹಿತಿಯನ್ನು ಸೇನಾಭೋವನ ಕಡತಕ್ಕೆ ಸೇರಿಸಲು ಆದೇಶಿಸಲಾಗಿದೆ.
ಈ ಶಾಸನದಿಂದ ಈಗಿನ ಶಿವಳ್ಳಿ ಗ್ರಾಮ ಹಿಂದೆ ಶಿವಪುರ ಎಂದು ಹಾಗೂ ಇಲ್ಲೊಂದು ಸ್ವತಂತ್ರ ಮಠವಿದ್ದ ಮಾಹಿತಿಯನ್ನು ಶಾಸನ ನೀಡುತ್ತದೆ. ಶಿವಪುರ ಸೀಮೆಯ ಉಲ್ಲೇಖ ಶಿಕಾರಿಪುರ ತಾಲೂಕಿನ ಹರಗಿ ಗ್ರಾಮದ ಶಾಸನಗಳಲ್ಲೂ ಕಂಡುಬರುತ್ತದೆ.
ಶಾಸನದಲ್ಲಿ ಉಲ್ಲೇಖಿಸಿರುವಂತೆ ಚೆನ್ನಮಲ್ಲನು ಕೆಳದಿ ಚೆನ್ನಮ್ಮನ ಅವಧಿಯಲ್ಲಿಯೂ ಉಳಿಗದ ಅಧಿಕಾರಿಯಾಗಿದ್ದ ಎಂಬುದು ಚಿಕ್ಕಜಂಬೂರಿನ ಶಾಸನದಲ್ಲಿ ಉಲ್ಲೇಖವಿದೆ.
ಈ ಶಾಸನ ಓದಲು ತಜ್ಞ ಡಾ. ಜಗದೀಶ್ ಮಾರ್ಗದರ್ಶನ ನೀಡಿದ್ದಾರೆಂದು ಸಂಶೋಧಕ ರಮೇಶ್ ಹಿರೇಜಂಬೂರು ತಿಳಿಸಿದ್ದಾರೆ.ಪತ್ತೆ ಕಾರ್ಯದಲ್ಲಿ ಅಶೋಕ ತಾಳಗುಂದ, ಗ್ರಾಮದ ಮಾರುತೆಪ್ಪ, ದಿನೇಶ್, ದೇವರಾಜ್, ಸುರೇಶ್ ಸಹಕಾರ ನೀಡಿದ್ದಾರೆಂದು ತಿಳಿಸಿದರು.