

ಗಂಗಾವತಿ: ತಾಲೂಕಿನ ಆಗೋಲಿ ಬೆಟ್ಟದಲ್ಲಿ 10ನೇ ಶತಮಾನಕ್ಕೆ ಸೇರಿದ ಶಾಸನವೊಂದು ಪತ್ತೆಯಾಗಿದೆ.
ಆಗೋಲಿ ದಕ್ಷಿಣ ಬದಿಯ ಗುಡ್ಡದ ಮೇಲಿನ ತಿಮ್ಮಪ್ಪ (ವೆಂಕಟೇಶ್ವರ) ದೇವಾಲಯದ ಬಳಿಯ ಕಲ್ಲಾಸರೆಯಲ್ಲಿ ಶಾಸನವಿದ್ದು, 3 ಸಾಲುಗಳಲ್ಲಿ ಶಾಸನವನ್ನು ಉಲ್ಲೇಖಿಸಲಾಗಿದೆ. ಶಾಸನದಲ್ಲಿ ಮಾನೂರು ಚಂಗೌಡನ ಬಗ್ಗೆ, ಆತನ ಯಶಸ್ಸು, ಕೀರ್ತಿಯನ್ನು ಸ್ತುತಿಸುತ್ತಿದ್ದು, ಹರಿಯ ಭಕ್ತನಾದ ಈತನು ಕಲಿಯುಗ ಕಾಲದಲ್ಲಿ ಸಿಂಹದಂತೆ ಹುಟ್ಟಿದನೆಂದು ಮತ್ತು ಶತ್ರು ಸೈನ್ಯಕ್ಕೆ ಗಂಡನೆಂದು ವರ್ಣಿಸಿದೆ.
ಕೊನೆಯಲ್ಲಿ ಇತನಿಗೆ ಮಂಗಳವಾಗಲಿ ಎಂದು ಹೇಳಿದೆ. ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಶಾಸನವನ್ನು ಪತ್ತೆ ಹಚ್ಚಿದ್ದು, ಶಾಸನದಲ್ಲಿ ಉಲ್ಲೇಖವಾದ ಮಾನೂರು ಚಂಗೌಡ ಯಾರು ಎನ್ನುವುದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ.
ಹರಿಭಕ್ತನೆಂದಿರುವುದರಿಂದ ಬೆಟ್ಟದಲ್ಲಿರುವ ವೆಂಕಟೇಶ್ವರ ದೇವಾಲಯಕ್ಕೂ ಈತನಿಗೂ ಸಂಬಂಧವಿದೆಯೇ ಎಂದು ಪರಿಶೀಲಿಸಬೇಕಿದೆ ಎಂದು ತಿಳಿಸಿದ್ದಾರೆ. ಶಾಸನ ಓದಲು ಕನ್ನಡ ವಿವಿ ಕುಲಪತಿ ಡಾ. ಪರಮಶಿವಮೂರ್ತಿ ಮಾರ್ಗದರ್ಶನ ಮಾಡಿದ್ದರೆ, ಸಂಶೋಧಕ ಡಾ.ಎನ್. ರವಿ ಚವ್ಹಾಣ ನೆರವಾಗಿದ್ದಾರೆ ಎಂದು ತಿಳಿಸಿದ್ದಾರೆ.