

ಕಾರವಾರ: ಭಾರತೀಯ ನೌಕಾಸೇನೆಯ ಎರಡು ದೈತ್ಯ ಯುದ್ಧ ವಿಮಾನ ವಾಹಕ ನೌಕೆಗಳು ಮೊದಲ ಬಾರಿಗೆ ಅರಬ್ಬಿ ಸಮುದ್ರದಲ್ಲಿ ತಾಲೀಮು ನಡೆಸಿವೆ. ಅವುಗಳ ಚಿತ್ರಗಳು ಉಪಗ್ರಹದ ಮೂಲಕವೂ ಸೆರೆಯಾಗಿದೆ.
ಭಾರತೀಯ ನೌಕಾಸೇನೆಯ ಅಸಾಧಾರಣ ಸಾಮರ್ಥ್ಯವನ್ನು ಜಗತ್ತಿಗೆ ಸಾರುವ ತಾಲೀಮು ಇದಾಗಿದೆ. ಅರಬ್ಬಿ ಸಮುದ್ರದಲ್ಲಿ ಕಾರವಾರ ನೌಕಾನೆಲೆಯ ಸಮೀಪ ಐಎನ್‌ಎಸ್ ವಿಕ್ರಮಾದಿತ್ಯ ಹಾಗೂ ಐಎನ್‌ಎಸ್ ವಿಕ್ರಾಂತ ನೌಕೆಗಳು ತಮ್ಮ ಗುಂಪಿನ 35 ಯುದ್ಧ ವಿಮಾನ ಹಾಗೂ 10 ಕ್ಕೂ ಹೆಚ್ಚು ನೌಕೆಗಳ ಜತೆ ಸೇರಿ ಜೂನ್ 3 ರಂದು ತಾಲೀಮು ನಡೆಸಿವೆ.
ಭಾರತೀಯ ನೌಕಾಸೇನೆ ಶನಿವಾರ ಅಪರೂಪದ ಸನ್ನಿವೇಶದ ಫೋಟೋ ಹಾಗೂ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಮಾತ್ರವಲ್ಲ ಸೆಟಲೈಟ್ ಚಿತ್ರಗಳು ಸೆರೆಯಾದ ಬಗ್ಗೆ ಇಂಡಿಯನ್ ಡಿಫೆನ್ಸ್ ರೀಸರ್ಚ್ ವಿಂಗ್(ಐಡಿಆರ್‌ಡಬ್ಲು) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಚಿತ್ರ ಹಾಗೂ ವಿವರವನ್ನು ಬರೆದಿದೆ. ಪಶ್ಚಿಮ ನೌಕಾ ವಲಯ ಎರಡು ನೌಕೆಗಳು ಯುದ್ಧ ಸನ್ನದ್ಧವಾಗಿರುವ ಬಗ್ಗೆ ಪರಿಶೀಲನೆ ನಡೆಸಿತು ಎಂದು ಐಡಿಆರ್‌ಡಬ್ಲು ತಿಳಿಸಿದೆ.
ರಷ್ಯಾದಿಂದ ಖರೀದಿಸಿದ ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯು ಕಾರವಾರದಲ್ಲಿ ನೆಲೆ ನಿಂತಿದ್ದರೆ, ಭಾರತೀಯ ತಂತ್ರಜ್ಞಾನದ ಮೂಲಕ ಇಲ್ಲೇ ಸಿದ್ಧಪಡಿಸಲಾದ ವಿಕ್ರಾಂತ ನೌಕೆಯು ಕೊಚ್ಚಿಯಲ್ಲಿ ನೆಲೆ ನಿಂತಿದೆ. ಇವೆರಡೂ ನೌಕೆಗಳು ಸಹೋದರರಂತೆ ಮೊದಲ ಬಾರಿಗೆ ಕಡಲಿಗಿಳಿದಿದ್ದು, ವಿಕ್ರಮರ ಪರಾಕ್ರಮ'ದ ಅಪರೂಪದ ಕ್ಷಣಕ್ಕೆ ಅರಬ್ಬಿ ಸಮುದ್ರ ಸಾಕ್ಷಿಯಾಗಿದೆ.
ದಾಖಲೆಗಳು: ವಿಕ್ರಾಂತ ನೌಕೆಯು ಮೇ ತಿಂಗಳಲ್ಲಿ ಕಾರವಾರ ನೌಕಾನೆಲೆಯಲ್ಲಿ ಬಂದು ಲಂಗರು ಹಾಕಿತ್ತು. ಕದಂಬ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆಯ ಭಾಗವಾಗಿ ನಿರ್ಮಾಣವಾದ ವಿಶೇಷ ಹಡಗುದಾಣ(ಜಟ್ಟಿ)ದಲ್ಲಿ ಮೊದಲ ಬಾರಿಗೆ ವಿಕ್ರಾಂತ ಯಶಸ್ವಿಯಾಗಿ ಬಂದು ನಿಂತಿತ್ತು. ಅದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ ಈ ಫೋಟೋವನ್ನು ಟ್ವೀಟ್ ಮಾಡಿ"ರಿಮಾರ್ಕೆಬಲ್" ಎಂದಿದ್ದರು.
ವಿಡಿಯೋ ನೋಡಿ:https://twitter.com/i/status/1667411767595765760
ಇದಾದ ಕೆಲವೇ ದಿನಗಳಲ್ಲಿ ವಿಕ್ರಾಂತ ಯುದ್ಧ ನೌಕೆಯ ಮೇಲೆ ಮಿಗ್29 ಕೆ ಯುದ್ಧ ವಿಮಾನವನ್ನು ರಾತ್ರಿ ವೇಳೆ ಯಶಸ್ವಿಯಾಗಿ ಇಳಿಸಲಾಗಿತ್ತು. ಇದೂ ಭಾರತೀಯ ನೌಕಾಸೇನೆಯ ಇತಿಹಾಸದಲ್ಲಿ ಮಹತ್ವದ ಕ್ಷಣ ಎಂದು ಗುರುತಿಸಲಾಗಿದೆ. ಗೋವಾದ ಐಎನ್‌ಎಸ್ ಹಂಸದಿಂದ ಮಿಗ್ ವಿಮಾನ ಕಾರ್ಯಾಚರಣೆ ನಡೆಸಿತ್ತು. ಎರಡೂ ನೌಕೆಗಳು ಒಟ್ಟಾಗಿ ತಮ್ಮ ಬಲ ಪ್ರದರ್ಶನ ಮಾಡಿ ಹೊಸ ದಾಖಲೆಗೆ ಸಾಕ್ಷಿಯಾದವು.