

ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಮನೆ ಕಂದಾಯ ಸೇರಿ ಇತರ ಕಡತಗಳನ್ನು ಪರಿಶೀಲನೆ ನಡೆಸಿತು.
ಸುಭಾಷ್‌ನಗರ ಬಡಾವಣೆಯ ಅಕ್ಬರ್ ಎಂಬುವರು ಪಟ್ಟಣ ಪಂಚಾಯಿತಿಯ ಕಂದಾಯ ಅಧಿಕಾರಿಯ ಮೇಲೆ ನೀಡಿದ್ದ ದೂರಿನ ಮೇರೆಗೆ ಮಡಿಕೇರಿಯ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಕಂದಾಯ ಅಧಿಕಾರಿ ಸೋಮೇಶ್ ಅವರನ್ನು ವಿಚಾರಣೆ ನಡೆಸಿದರು.
ಪಟ್ಟಣದ ಪಂಜರ್‌ಪೇಟೆಯಲ್ಲಿರುವ ಅಫ್ಜಲ್ ಹಾಗೂ ಅಕ್ಬರ್ ಎಂಬುವರ ಎರಡು ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕೆ ಆಕ್ಷೇಪಣೆ ರಹಿತ ದೃಢೀಕರಣ ಪತ್ರ ಪಡೆಯಲು ಇಲ್ಲಿನ ಕಂದಾಯ ಪರಿವೀಕ್ಷಕ ಸೋಮೇಶ್ ಎರಡು ವರ್ಷಗಳಿಂದ ಸತಾಯಿಸುತ್ತಿದ್ದರು. ಎರಡು ಅಂತಸ್ತಿನ ಕಟ್ಟಡ ಕಟ್ಟಲು ಸಂಬಂಧಿಸಿದ ಇಲಾಖೆಯಿಂದ ಅಧಿಕೃತ ಪರವಾನಗಿ ಪಡೆದಿದ್ದರೂ ಅದನ್ನು ಲೆಕ್ಕಿಸದ ಕಂದಾಯ ಅಧಿಕಾರಿ ಮನೆಗಳಿಗೆ ದುಪ್ಪಟ್ಟು ತೆರಿಗೆ ವಿಧಿಸಿದ್ದಾರೆ. ವಿದ್ಯುತ್ ಸಂಪರ್ಕ ಪಡೆಯಲು ಆಕ್ಷೇಪಣೆ ಇಲ್ಲ ಎಂಬ ಪತ್ರ ನೀಡುತ್ತಿಲ್ಲ. ಇದರ ಕುರಿತು ಲೋಕಾಯುಕ್ತ ಅಧಿಕಾರಿಗಳು ಸೂಕ್ತ ತನಿಖೆ ನಡೆಸುವಂತೆ ಇಲಾಖೆಗೆ ದೂರು ನೀಡಲಾಗಿತ್ತು.
ವಿರಾಜಪೇಟೆ ಪಟ್ಟಣ ಪಂಚಾಯಿತಿ ಅಧಿಕಾರಿಯನ್ನು ತನಿಖೆ ನಡೆಸಿದ ಇಲಾಖೆಯ ಸರ್ಕಲ್ ಇನ್ಸ್‌ಪೆಕ್ಟರ್ ಸುಬ್ರಮಣಿ ಅವರು ದೂರುದಾರರು ನೀಡುವ ದಾಖಲೆಗಳ ಆಧಾರದ ಮೇಲೆ ಮುಂದೆ ಕೂಲಂಕಷವಾಗಿ ತನಿಖೆ ಹಾಗೂ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಫ್ಜಲ್ ಹಾಗೂ ಅಕ್ಬರ್ ಅವರು ದಾಖಲೆ ಸಮೇತ ಮತ್ತೊಂದು ದೂರನ್ನು ಲೋಕಾಯುಕ್ತಕ್ಕೆ ತಕ್ಷಣ ಸಲ್ಲಿಸುವಂತೆ ಸೂಚಿಸಿದರು.
ಲೋಕಾಯುಕ್ತ ತಂಡ ಮೊದಲು ಇಲ್ಲಿನ ತಾಲೂಕು ಕಚೇರಿಗೆ ಭೇಟಿ ನೀಡಿ ಭೂ ಹಿಡುವಳಿಗೆ ಸಂಬಂಧಿಸಿದಂತೆ ಎರಡು ದೂರುಗಳನ್ನು ಸ್ವೀಕರಿಸಿದ ನಂತರ, ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ವಿಚಾರಣೆ ನಡೆಸಿತು.