

ಮೈಸೂರು: ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಆಯ್ಕೆ ಪಟ್ಟಿಯು ಕಳವಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಂತಹ ದೊಡ್ಡ ಹಗರಣಗಳನ್ನು ಪೊಲೀಸರಿಂದ ತನಿಖೆ ಮಾಡಲು ಆಗುವುದಿಲ್ಲ. ಬದಲಾಗಿ ಉನ್ನತ ಮಟ್ಟದ ಸಂಸ್ಥೆಗಳ ಮೂಲಕ ತನಿಖೆ ಮಾಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.
2016ನೇ ಸಾಲಿನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಕಳವಾಗಿದೆ ಎಂದು ಸರ್ಕಾರ ದೂರು ನೀಡಿದೆ. ಇದರಿಂದ ಆ ಸಾಲಿನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಭವಿಷ್ಯ ಆಂತಕದಲ್ಲಿ ಇದೆ. ನಾಡಿನ ಜನರು ಮುರ್ಖರೆಂದುಕೊಂಡು ಸರ್ಕಾರ ಸುಳ್ಳನ್ನು ಬಹಳ ಚನ್ನಾಗಿ ಹೇಳುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಪಟ್ಟಿ ಕಳವಾದರೆ ಏನಂತೆ, ಹಾರ್ಡ್‌ಡಿಸ್ಕ್ ಇಲ್ಲವೆ, ಕಂಪ್ಯೂಟರ್ ಇಲ್ಲವೇ, ಗೂಗಲ್ ಡ್ರೈವ್ ಇಲ್ಲವೇ, ಇವುಗಳಲ್ಲಿ ಪಟ್ಟಿಯನ್ನು ಇಟ್ಟಿರಬಹುದಲ್ಲ. ಅಭ್ಯರ್ಥಿಗಳ ಅಂತಿಮ ಆಯ್ಕೆಯ ಅಖೈರು ಆಗುವವರೆಗೆ ಎಷ್ಟು ಹಂತದಲ್ಲಿ ಕಡತ ಓಡಾಡುತ್ತದೆ. ಎಷ್ಟು ಕರಡು (ಡ್ರಾಫ್ಟ್)ಗಳು ರಚನೆಯಾಗುತ್ತವೆ. ಅವುಗಳಲ್ಲಿ ಕೂಡ ಹೆಸರುಗಳು ಗೊತ್ತಾಗುತ್ತದೆ. ಆದರೆ ಸರ್ಕಾರ ಇದ್ಯಾವುದನ್ನು ಮಾಡದೇ ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಿರುವುದನ್ನು ನೋಡಿದರೆ ಇದರಲ್ಲಿ ಹಗರಣದ ವಾಸನೆ ಇದೆ. ಇದರ ಹಿಂದೆ ಆಳುವ ಪಕ್ಷ ಹಾಗೂ ವಿರೋಧ ಪಕ್ಷದವರು ಸೇರಿದಂತೆ ದೊಡ್ಡ-ದೊಡ್ಡವರ ಕೈವಾಡ ಇದೆ. ಆದ್ದರಿಂದಲೇ ಯಾರೊಬ್ಬರು ಈ ವಿಚಾರವಾಗಿ ಮಾತನಾಡುತ್ತಿಲ್ಲ. ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡಾ ಮಾತನಾಡಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.