

ಸಿದ್ದಾಪುರ: ತಮ್ಮ ವೈಯಕ್ತಿಕ ಜೀವನಕ್ಕಿಂತ ದೇಶ ಸೇವೆಯೇ ಮುಖ್ಯ ಎಂದು ಪರಿಗಣಿಸಿರುವ ಜಿಲ್ಲೆಯ ಇಬ್ಬರು ಸೈನಿಕರು ಕರ್ತವ್ಯಕ್ಕೆ ಹೊರಟು ನಿಂತಿದ್ದು, ಮಾದರಿಯಾಗಿದ್ದಾರೆ.
8 ದಿನದ ಹಿಂದಷ್ಟೇ ವಿವಾಹವಾಗಿ ಹನಿಮೂನಿಗೆ ತೆರಳುತ್ತಿದ್ದ ಯೋಧ ತನ್ನ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಶುಕ್ರವಾರ ಕರ್ತವ್ಯಕ್ಕೆ ಮರಳಿದರು. ಅಣ್ಣನ ಮಗಳ ಮದುವೆ ಕಾರ್ಯಕ್ಕಾಗಿ ಬಂದಿದ್ದ ಇನ್ನೊಬ್ಬ ಯೋಧನೂ ವಾಪಸ್ ಹೊರಟಿದ್ದು, ಇಬ್ಬರನ್ನೂ ಊರವರು ಸನ್ಮಾನಿಸಿ ಬೀಳ್ಕೊಟ್ಟರು.
ತಾಲೂಕಿನ ಹೊಸೂರಿನ ಜಯವಂತ ಯು.ಎಸ್. ಚತ್ತೀಸಗಡದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೇ 1 ರಂದು ಅವರ ವಿವಾಹವಾಗಿತ್ತು. ಪತ್ನಿಯೊಂದಿಗೆ ಸಂತಸದ ಕ್ಷಣಗಳನ್ನು ಕಳೆಯಲೆಂದು ಅವರು ಊಟಿಗೆ ಹನಿಮೂನಿಗೆ ಹೊರಟಿದ್ದರು. ಮೈಸೂರಿನವರೆಗೆ ಹೋಗುತ್ತಿದ್ದಂತೆ ಅವರಿಗೆ ಕರ್ತವ್ಯದ ಕರೆ ಬಂದಿದೆ. ಅವರು ಪ್ರವಾಸವನ್ನು ಅಲ್ಲಿಗೇ ಮೊಟಕುಗೊಳಿಸಿ, ಪತ್ನಿಯನ್ನು ಮನೆಗೆ ಬಿಟ್ಟು ತೆರಳಿದ್ದಾರೆ.
ತಾಲೂಕಿನ ಕನ್ನಳ್ಳಿಯ ಮಹದೇವ ಕೆ.ನಾಯ್ಕ ದೆಹಲಿಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಅಣ್ಣನ ಮಗಳ ಮದುವೆಗೆಂದು ಪತ್ನಿ ಮಕ್ಕಳೊಂದಿಗೆ ಊರಿಗೆ ಆಗಮಿಸಿದ್ದರು. ಆದರೆ, ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ಮರಳಿದ್ದಾರೆ. ಇಬ್ಬರೂ ಸೈನಿಕರು ಖುಷಿಯಿಂದಲೇ ತಮ್ಮ ಕರ್ತವ್ಯಕ್ಕೆ ತೆರಳಿದ್ದು ವಿಶೇಷವಾಗಿತ್ತು.
ಇಬ್ಬರೂ ಸೈನಿಕರನ್ನು ತಾಲೂಕಿನ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಾಗರಿಕರು ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗೌರವಿಸಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಗುರುರಾಜ ಶಾನಭಾಗ ಮಾತನಾಡಿ ವೈರಿ ರಾಷ್ಟç ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಈ ಸಂದರ್ಭದಲ್ಲಿ ನಮ್ಮ ತಾಲೂಕಿನ ಹೆಮ್ಮೆಯ ಸೈನಿಕರು ಸೇವೆಗೆ ಮರಳಬೇಕಾಗಿದೆ. ಯುದ್ಧವೇ ನಡೆದಲ್ಲಿ ನಿಮ್ಮ ಕೂದಲೂ ಕೊಂಕದಿರಲಿ. ಭಾರತ ಗೆಲ್ಲುವಂತಾಗಲಿ ಎಂದರು. ತಮ್ಮ ಕುಟುಂಬದವರೊAದಿಗೆ ನಾವೆಲ್ಲಾ ಬೆಂಗಾವಲಾಗಿ ಇರುತ್ತೇವೆ ಎಂದು ಸೈನಿಕರ ಕುಟುಂಬದವರಿಗೆ ಧೈರ್ಯ ಹೇಳಬೇಕು, ಅದರಂತೆಯೆ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕುಮಾರ ಗೌಡರ್, ಪದಾಽಕಾರಿಗಳಾದ ಪಿ.ಡಿ.ನಾಯ್ಕ, ಸುರೇಶ ಪಂಡಿತ ಸೇರಿದಂತೆ ಅನೇಕ ಮಾಜಿ ಸೈನಿಕರು ಉಪಸ್ಥಿತರಿದ್ದು ಸೇವೆಗೆ ಮರಳುತ್ತಿರುವ ಸೈನಿಕರನ್ನು ಬಿಗಿದಪ್ಪಿ ಹುರಿದುಂಬಿಸಿ ಬೀಳ್ಕೊಟ್ಟರು. ಸೈನಿಕರ ಧರ್ಮಪತ್ನಿಯರು ಆರತಿ ಬೆಳಗಿ, ಹಣೆಗೆ ಸಿಂಧೂರ ಹಚ್ಚಿ ಆನಂದ ಭಾಷ್ಪ ಹರಿಸುತ್ತಲೇ ತಮ್ಮ ಸಂಗಾತಿಯನ್ನು ದೇಶ ಸೇವೆಗೆ ಕಳಿಸುತ್ತಿರುವ ದೃಶ್ಯ ಮನಕಲಕುವಂತಿತ್ತು.