

ವಿಜಯವಾಣಿ ಸುದ್ದಿಜಾಲ ಧಾರವಾಡ
ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ನಗರದ ಎಸ್ಡಿಎಂ ನಾರಾಯಣ ಹಾರ್ಟ್ ಸೆಂಟರ್ನಲ್ಲಿ ಚಿಕ್ಕ ರಂಧ್ರದ ಮೂಲಕ ಹೃದಯ ಶಸ್ತ್ರ ಚಿಕಿತ್ಸೆ ನೀಡಿ ಹೊಸ ಮೈಲುಗಲ್ಲು ಸಾಧಿಸಲಾಗಿದೆ ಎಂದು ವೈದ್ಯ ಡಾ. ಸಾಯಿ ಸೂರಜ್ ಕೋಟೆರ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಿಷಲ್ ವೆಸೆಲ್ ಕಾಯಿಲೆಯಿಂದ ಬಳಲುತ್ತಿದ್ದ 57 ವರ್ಷದ ಭರತ್ಸಿಂಗ್ ರಜಪೂತ ಎಂಬುವವರಿಗೆ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಚಿಕಿತ್ಸೆಯಿಂದ ರೋಗಿಯು ಕೆಲ ದಿನಗಳಲ್ಲೇ ಸಾಮಾನ್ಯ ಮನಷ್ಯನಂತೆ ತನ್ನ ಕೆಲಸ, ಕಾರ್ಯಗಳಲ್ಲಿ ತೊಡಗಲು ಅನುಕೂಲವಾಗಲಿದೆ ಎಂದರು.
ಟ್ರಿಷಲ್ ವೆಸೆಲ್ ಕಾಯಿಲೆಯಿಂದ ಬಳಲುತ್ತಿದ್ದ ರಜಪೂತ ಅವರಿಗೆ ಸುಸ್ತು, ನೋವು ಹೆಚ್ಚಿತ್ತು. ಇದರ ಪರಿಶೀಲನೆಗಾಗಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ಆಗಮಿಸಿದ್ದರು. ಆಗ ಅವರಿಗೆ 7 ಸೆಂ.ಮೀ ಗಾಯದ ಮೂಲಕ ಚಿಕ್ಕ ರಂಧ್ರ ಮಾಡಿ ಪರಿಧಮನಿಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆಯಾದ ೩ ದಿನಗಳಲ್ಲೇ ಆಸ್ಪತ್ರೆಯಿಂದ ಮನೆಗೆ ತೆರಳಿದ ಅವರು, ಸುಮಾರು 20 ದಿನಗಳಲ್ಲಿ ತಮ್ಮ ಕೆಲಸ ಆರಂಭಿಸಿದ್ದಾರೆ. ಈ ಚಿಕಿತ್ಸೆಯಿಂದ ಹೆಚ್ಚು ಗಾಯದ ಸಮಸ್ಯೆ, ಸೋಂಕಿನ ಅಪಾಯ, ನೋವಿಲ್ಲ. ಇದಲ್ಲದೆ ಬೇಗ ಚೇತರಿಗೆ ಕಾಣುತ್ತದೆ ಎಂದರು.
ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಸಾಯಿ ಸೂರಜ್ ಕೋಟೆರ್, ಹೃದಯ ಅರವಳಿಕೆ ತಜ್ಞ ಡಾ. ಗಣೇಶ ನಾಯಕ ಮತ್ತು ಡಾ. ಪ್ರಮೋದ ಹೊನ್ನುರ ಹಾಗೂ ಪರಿಣಿತ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಿದೆ. ಹಾರ್ಟ್ ಸೆಂಟರ್ನಲ್ಲಿ ಈಗ ಪರಿಧಮನಿಯ ಬೈಪಾಸ್ ಗ್ರಾಫಿಂಗ್, ಕವಾಚ (ವಾಲ್ವ) ಬದಲಾವಣೆ ಅಥವಾ ದುರಸ್ತಿ, ಜನ್ಮ ಭೌತವಾದ ಹೃದಯ ತೊಂದರೆಗಳಿಗೆ ಚಿಕಿತ್ಸೆ ಸೇರಿ ಹಲವಾರು ಚಿಕಿತ್ಸೆಗಳನ್ನು ಚಿಕ್ಕ ರಂಧ್ರದ ಮೂಲಕ ನಿರ್ವಹಿಸಲು ಆಸ್ಪತ್ರೆ ಸನ್ನದ್ಧವಾಗಿದೆ. ಈ ರೀತಿಯ ಸುಧಾರಿತ ಸೌಲಭ್ಯಗಳು ಸ್ಥಳಿಯವಾಗಿ ಸಿಗುವುದರಿಂದ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ ಎಂದರು.
ಡಾ. ಗಣೇಶ ನಾಯಕ, ಭರತಸಿಂಗ್ ರಜಪೂತ, ಅಜೇಯ ಹುಲಮನಿ, ದುಂಡೇಶ ತಡಕೋಡ, ಇತರರು ಇದ್ದರು.