ಹೊಸತನಕ್ಕೆ ಪ್ರೋತ್ಸಾಹ ನೀಡುವಂತಾಗಬೇಕು: ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

Kannada Rajyotsava Programme
Published on

ಹಾನಗಲ್ಲ: ಸಮಾಜಮುಖಿ ಚಿಂತನೆಗಳನ್ನು ಬೆಳೆಸಬೇಕೇ ಹೊರತೂ ಅನಗತ್ಯ ಟೀಕೆಗಳಿಂದ ಹಿನ್ನಡೆಗೆ ಅವಕಾಶ ನೀಡಬಾರದು. ಸಮುದಾಯದಲ್ಲಿ ಹೊಸತನವ ಬಿತ್ತಿ ಬೆಳೆಸುವ ಇಚ್ಛಾಶಕ್ತಿ ನಮ್ಮದಾಗಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಅ.ನ. ಕುಂದಾಪುರ ಹಾಗೂ ಬಿ.ಬಿ. ಪದಕಿ ಟ್ರಸ್ಟ್, ಮಂಥನ ವೇದಿಕೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ, ರಾಷ್ಟ್ರ, ರಾಜ್ಯ ಪ್ರಶಸ್ತಿ ಪುರಸ್ಕೃತರ ಸಮ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ಪ್ರೀತಿಯೇ ನಿಜವಾದ ಗೆಲುವು. ನಮ್ಮ ಬರಹ ಬದುಕು ಒಂದೇ ಆಗಿರಬೇಕು. ಯಾವುದೇ ಪ್ರಶಸ್ತಿ ಪುರಸ್ಕಾರಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದರು.

ಹಿರಿಯ ಪತ್ರಕರ್ತ ಋಷಿಕೇಶ ಬಹಾದ್ದೂರದೇಸಾಯಿ ಮಾತನಾಡಿ, ಪ್ರಶಸ್ತಿಗಳು ಅರ್ಹರ ಮುಡಿಗೇರಬೇಕು. ಸಣ್ಣ ಸಣ್ಣ ಹಳ್ಳಿಗಳಲ್ಲಿ ಜಗವೇ ಮೆಚ್ಚುವ ಸಾಧಕರಿದ್ದಾರೆ. ಊರು ಸಣ್ಣದು, ದೊಡ್ಡದು ಎನ್ನುವುದಕ್ಕಿಂತ ಸಾಧನೆ ಎಂತಹದ್ದು ಎಂಬದು ಮುಖ್ಯ. ಕಲೆ ಶ್ರೀಮಂತರ ವ್ಯಾಪಾರೀಕರಣದ ಸ್ವತ್ತಾಗಬಾರದು. ನಾವು ಸತ್ಯದ ಪರವಾಗಿದ್ದು, ಸಾಂಸ್ಕೃತಿಕ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದರು.

ಕನ್ನಡಪ್ರಭ ಅಸಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಕರಬಸಪ್ಪ ಗೊಂದಿ ಸನ್ಮಾನ ಸ್ವೀಕರಿಸಿ, ರಕ್ತ ದಾನವಾಗಬೇಕೆ ಹೊರತು, ದಾರಿಯಲ್ಲಿ ಪೋಲಾಗುವುದು ಬೇಡ. ರಕ್ತ ದಾನದ ಅಗತ್ಯತೆ ಕುರಿತು ಸಮುದಾಯದಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಿರಸಿಯ ನಾರಾಯಣ ಭಾಗವತ ಸನ್ಮಾನ ಸ್ವೀಕರಿಸಿ, ಮಕ್ಕಳನ್ನು ವರ್ಗ ಕೋಣೆಯ ಒಳಗೆ-ಹೊರಗೆ ಪ್ರೀತಿಸಿ ಪಾಠ ಮಾಡಿದ್ದಕ್ಕೆ, ಪ್ರತಿಭೆಯನ್ನು ಗುರುತಿಸಿ ಬೆಳಸಿದ್ದಕ್ಕೆ, ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಪಾಠದಾಚೆಗಿನ ಸಾಂಸ್ಕೃತಿಕ ಪರಿಸರವನ್ನು ಮಕ್ಕಳಿಗೆ ಪರಿಚಯಿಸಿದ್ದಕ್ಕೆ ನನಗೆ ಪ್ರಶಸ್ತಿ ಬಂದಿದೆ. ಜಗತ್ತು ವಿಶಾಲವಾಗಿದೆ. ಈ ಜಗತ್ತಿನಲ್ಲಿ ಒಳ್ಳೆಯದನ್ನು ನೋಡಿ ಕಲಿಯುವುದು ಕೂಡ ಬಹಳ ಇದೆ ಎಂದರು.

ನಿವೃತ್ತ ಹಿರಿಯ ಶಿಕ್ಷಕ ಕೆ.ಎಚ್. ಆರಾಧ್ಯಮಠ ಅವರಿಗೆ ಬಿ.ಬಿ. ಪದಕಿ ಆದರ್ಶ ಶಿಕ್ಷಕ ಪುರಸ್ಕಾರ, ವೀರನಗೌಡ ಪಾಟೀಲ ಹಾಗೂ ಸೌಜನ್ಯ ಕುಲಕರ್ಣಿ ಅವರಿಗೆ ಅ.ನ. ಕುಂದಾಪುರ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಟ್ರಸ್ಟಿನ ಗೌರವಾಧ್ಯಕ್ಷ ಕೆ.ಎಲ್.ದೇಶಪಾಂಡೆ ಅಧ್ಯಕ್ಷತೆವಹಿಸಿದ್ದರು. ಶರಶ್ಚಂದ್ರ ದೇಸಾಯಿ, ಪ್ರಕಾಶ ಪದಕಿ, ವಿ.ಬಿ. ದೀಕ್ಷಿತ್, ಆರ್.ಸಿ. ದೇಸಾಯಿ, ಆನಂದ ಗಾಜಿಪುರ, ಶರಶ್ಚಂದ್ರ ದೇಸಾಯಿ ಉಪಸ್ಥಿತರಿದ್ದರು. ಸರಸ್ವತಿ ಸಂಗೀತ ಶಾಲೆಯ ಕಲಾವಿದ ನರಸಿಂಹ ಕೋಮಾರ ಹಾಗೂ ಕಲಾವಿದರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಟ್ರಸ್ಟ್ ಕಾರ್ಯದರ್ಶಿ ಗಿರೀಶ ದೇಶಪಾಂಡೆ ಸ್ವಾಗತಿಸಿದರು. ಅಧ್ಯಕ್ಷ ಉದಯ ನಾಸಿಕ ಪ್ರಾಸ್ತಾವಿಕ ಮಾತನಾಡಿದರು. ಯಮುನಾ ಕೋಣೇಸರ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಪದಕಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net