ಔದ್ಯೋಗಿಕ ಕ್ಷೇತ್ರದಲ್ಲಿ ಆವಿಷ್ಕಾರ ಅವಶ್ಯ

mysore
Published on

ಮೈಸೂರು: ದೇಶದ ಔದ್ಯೋಗಿಕ ಕ್ಷೇತ್ರದಲ್ಲಿನ ಇಂದಿನ ಸ್ಥಿತಿಗಿಂತ ಅತ್ಯುತ್ತಮ ಪ್ರಗತಿಗೆ ನಮ್ಮೆಲ್ಲರ ಮನಸ್ಥಿತಿ ಮತ್ತು ಮನೋಭಾವ ಬದಲಾಗಬೇಕು ಎಂದು ಸೈಕಲ್ ಅಗರ್‌ಬತ್ತಿ ಮತ್ತು ರಂಗಸನ್ಸ್ ಏರೋಸ್ಪೇಸ್ ಪ್ರೈ.ಲಿಮಿಟೆಡ್ ನಿರ್ದೇಶಕ ಪವನ್‌ರಂಗ ಹೇಳಿದರು.


ಭಾರತೀಯ ಉದ್ಯಮದ ಒಕ್ಕೂಟ, ಉದ್ಯಮ ಸಂಸ್ಥೆಯ ಸಂವಹನ ಮತ್ತು ಉನ್ನತ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ನಗರದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಭವಿಷ್ಯವನ್ನು ಸಶಕ್ತಗೊಳಿಸುವ ಕೌಶಲಗಳು: ಉದ್ಯಮದ ಪ್ರವೃತ್ತಿಗಳು, ಉದ್ಯಮಶೀಲತೆ ಮತ್ತು ವೃತ್ತಿಮಾರ್ಗಗಳು’ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ದೇಶ ಅಭಿವೃದ್ಧಿಯ ದಾರಿಯಲ್ಲಿ ಸಾಕಷ್ಟು ಬದಲಾವಣೆಗಳೊಂದಿಗೆ ಮುನ್ನಡೆಯುತ್ತಿದೆ. ದೇಶದ ಅಭಿವೃದ್ಧಿಗೆ ಸ್ವಾವಲಂಬನೆಯ ಮಹತ್ವವನ್ನು ಇಂದು ನಾವು ಅರಿತಿದ್ದೇವೆ. ಔದ್ಯೋಗಿಕ ಕ್ಷೇತ್ರದಲ್ಲಿ ಮತ್ತು ಹೊಸ ಅನ್ವೇಷಣೆ-ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.


ಜ್ಞಾನ ಎಂಬುದು ಸರ್ವಶ್ರೇಷ್ಠವಾದದ್ದು ಮತ್ತು ಅತ್ಯುತ್ತಮ ಸಾಧನ ಎಂಬುದನ್ನು ಮರೆಯಬಾರದು. ಅದನ್ನು ಸರಿಯಾದ ರೀತಿಯಲ್ಲಿ ಪಡೆದು ಬಳಸಬೇಕು. ನಾವು ಹೇಗೆ ಎಲ್ಲ ರೀತಿಯಲ್ಲೂ ಸಶಕ್ತರಾಗುವುದು ಮತ್ತು ಸ್ವಾವಲಂಬಿಗಳಾಗುವುದು ಎಂಬುವದನ್ನು ಯೋಚಿಸುತ್ತಿರಬೇಕು. ಸಶಕ್ತ ಮತ್ತು ಸ್ವಾವಲಂಬಿ ಜೀವನಕ್ಕೆ ಹಲವು ಕೌಶಲ ಅಗತ್ಯ. ಅವುಗಳನ್ನು ಪರಿಪೂರ್ಣಗೊಳಿಸಿಕೊಳ್ಳುವುದರ ಕಡೆ ಶೈಕ್ಷಣಿಕ ಚಟುವಟಿಕೆಗಳಿರಬೇಕು ಎಂದರು.


ಭವಿಷ್ಯದ ಗುರಿಯನ್ನು ಮುಟ್ಟುವುದಕ್ಕೆ ಅಗತ್ಯವಾದ ಶಿಕ್ಷಣ ಮತ್ತು ಕೌಶಲವನ್ನು ಪೂರ್ವಯೋಜಿತವಾಗಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರೊಸೆಟ್ಟಾ ಬಯೋಕಾನ್ಫಾರ್ಮ್ಯಾಟಿಕ್ಸ್ ಪ್ರೈ. ಲಿಮಿಟೆಡ್‌ನ ಸಿಇಒ, ವಿಜ್ಞಾನಿ ಡಾ.ಎಂ.ಧರ್ಮಪ್ರಸಾದ್‌ಮಾತನಾಡಿ, ಕೈಗಾರಿಕಾ ಕ್ರಾಂತಿ ಹಂತ ಹಂತವಾಗಿ ಬೆಳೆಯುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳು ಕಾಲದಿಂದ ಕಾಲಕ್ಕೆ ಬದಲಾವಣೆಯನ್ನು ಹೊಂದುತ್ತಾ ಬಂದಿವೆ. ಈ ಬದಲಾವಣೆಯ ಸ್ವರೂಪವನ್ನು ಅರ್ಥಮಾಡಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.


ಬದಲಾಗುತ್ತಿರುವ ತಂತ್ರಜ್ಞಾನವನ್ನು ಅರ್ಥಮಾಡಿಕೊಂಡು ತಂತ್ರಜ್ಞಾನದ ಮೇಲೆ ಸವಾರಿ ಮಾಡುವುದನ್ನು ಕಲಿಯಬೇಕು. ಸಾಮಾಜಿಕವಾಗಿ ಗುರುತಿಸಿಕೊಳ್ಳುವುದು ಇಂದು ಬಹಳ ಮುಖ್ಯ. ಸಮಯವನ್ನು ವ್ಯರ್ಥಗೊಳಿಸದೆ ಕೌಶಲಗಳೊಂದಿಗೆ ಸಾಧನೆಯ ಮಾರ್ಗಗಳನ್ನು ಅನ್ವೇಷಿಸಬೇಕು ಎಂದು ತಿಳಿಸಿದರು.


ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿದರು. 550 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಎಸ್. ಪ್ರಶಾಂತ್, ಬಿ.ಶಿವಶಂಕರ್, ವಿಜಯಾನಂದ, ಡಾ.ಶಿಲ್ಪಾ ಜ್ಞಾನೇಶ್, ರಶ್ಮಿ ಶಂಕರ್, ಮಧು ಕುಮಾರ್, ಪ್ರಾಂಶುಪಾಲರಾದ ಡಾ.ಎಂ.ಪ್ರಭು, ಐಕ್ಯೂಎಸಿಯ ಸಂಚಾಲಕ ಡಾ.ಎನ್.ರಾಜೇಂದ್ರಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net