

ಬೆಂಗಳೂರು: ಸರ್ಕಾರದ ಮೂಲಕ ಪಿಎಂ ಕಿಸಾನ್ ಹಾಗೂ ಅಗ್ರಿ-ಇನ್ಫ್ರಾ ಫಂಡ್ ನಂತಹ ಯೋಜನೆಗಳು ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಏಕೀಕರಣವನ್ನು ಪ್ರೋತ್ಸಾಹಿಸುತ್ತಿದ್ದು, ಆಹಾರ ಭದ್ರತೆ ಮತ್ತು ಸುಸ್ಥಿರ ಅಭ್ಯಾಸಗಳ ಮೇಲೆ ಜಾಗತಿಕ ಗಮನ ಹರಿಸುವಿಕೆಯಿಂದ ಹೂಡಿಕೆ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಯಲ್ಲಿ ಮಂಗಳವಾರ ನಡೆದ ಕೃಷಿ ನವೋದ್ಯಮಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ತಾಂತ್ರಿಕ ಪ್ರಗತಿಯಿಂದ ಎಐ ತಂತ್ರಜ್ಞಾನದ ಕಲಿಕೆ ಹಾಗೂ ಕೃಷಿಯಲ್ಲಿ ಐಒಟಿ ಅಪ್ಲಿಕೇಷನ್‌ಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ರಫ್ತು ಅವಕಾಶಗಳಿಂದ ಜಾಗತಿಕವಾಗಿ ಭಾರತೀಯ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ನವೋದ್ಯಮಿಗಳನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ಬೆಂಗಳೂರು ಸ್ಟಾರ್ಟ್‌ಟಪ್‌ಗಳ ಹಬ್ ಆಗಿ ಗುರುತಿಸಿಕೊಂಡಿದೆ. ಈ ಅವಕಾಶವನ್ನು ಐಟಿ-ಬಿಟಿ ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸದೆ ಕೃಷಿ ಉದ್ಯಮಕ್ಕೂ ಬಳಸಿಕೊಳ್ಳಬೇಕು. ಇದಕ್ಕಾಗಿ ಹೊಸ ಆವಿಷ್ಕಾರ, ಸಂಶೋಧನೆಗೆ ಒತ್ತು ನೀಡಬೇಕಿದ್ದು, ತಜ್ಞರು ಜಾಗತಿಕ ಮಟ್ಟದ ಅಗತ್ಯತೆಯನ್ನು ಮನಗಂಡು ಮುಂದುವರಿಯಬೇಕು. ಸ್ಟಾರ್ಟ್‌ಟಪ್‌ಗಳು ಹೂಡಿಕೆದಾರರ, ಕಾರ್ಪೋರೇಟ್ ಮತ್ತು ನೀತಿ-ನಿರೂಪಕರ ನಡುವೆ ಸೇತುವೆ ಸಂಪರ್ಕವಾಗಿದೆ ಎಂದು ತಿಳಿಸಿದರು.
ಭಾರತ ನವೋದ್ಯಮಿಗಳ ನೆಲ:
ಪ್ರಸ್ತುತ ಭಾರತವು 2,800 ಮಾನ್ಯತೆ ಪಡೆದ ಅಗ್ರಿ-ಟೆಕ್ ಸ್ಟಾರ್ಟ್‌ಟಪ್‌ಗಳಿಗೆ ನೆಲೆಯಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳು ಕೃಷಿ ಆವಿಷ್ಕಾರದ ಕೇಂದ್ರಗಳಾಗಿದ್ದು, ಈ ಸ್ಟಾರ್ಟ್‌ಟಪ್‌ಗಳಲ್ಲಿ ಅಂದಾಜು ಶೇ.60 ಮೊದಲ ಮತ್ತು ಎರಡನೇ ಹಂತದ ನಗರಗಳಲ್ಲಿ ಕೇಂದ್ರೀಕೃತವಾಗಿವೆ. ಕಳೆದ ವರ್ಷಾಂತ್ಯದಲ್ಲಿ ಭಾರತವು 1,17,254 ಮಾನ್ಯತೆ ಪಡೆದ ನವೋದ್ಯಮಿಗಳೊಂದಿಗೆ 3ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಸ್ಟಾರ್ಟ್‌ಟಪ್‌ನ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. ಜತೆಗೆ ಈ ಸ್ಟಾರ್ಟ್‌ಟಪ್‌ಗಳು 6 ವೈವಿಧ್ಯಮಯ ಕೈಗಾರಿಕಾ ವಲಯಗಳಲ್ಲಿ ವ್ಯಾಪಿಸಿದ್ದು, 12.42 ಲಕ್ಷ ಸಂಖ್ಯೆಯಷ್ಟು ನೇರ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಸಚಿವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಐಟಿ-ಬಿಟಿ ಇಲಾಖೆಯ ‘ಕಿಟ್ಸ್’ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಎಚ್.ವಿ.ದರ್ಶನ್, ಕೃಷಿ ವಿವಿಯ ಕುಲಸಚಿವ ಡಾ. ಎಚ್.ಎಸ್.ಶಿವರಾಮು, ಡಾ. ಮೋಹನ್ ನಾಯ್ಕ, ಡಾ. ಎನ್.ಬಿ.ಪ್ರಕಾಶ್ ಹಾಗೂ ಇತರರು ಇದ್ದರು.
ಡಿಜಿಟಲ್ ಕೃಷಿಯು ರೈತರ ಅಗತ್ಯಗಳನ್ನು ಪೂರೈಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಬದಲಾದ ಪರಿಸ್ಥಿತಿಯಲ್ಲಿ ರೈತಸ್ನೇಹಿ ತಂತ್ರಜ್ಞಾನಗಳ ಬಗ್ಗೆ ಹೆಚ್ಚು ಸಂಶೋಧನೆ ಆಗಬೇಕು. ಕೃಷಿ ನವೋದ್ಯಮದಲ್ಲಿ ರೋಬಟ್ ನಿರ್ವಹಣೆ, ಯಾಂತ್ರೀಕೃತ ಬೇಸಾಯ, ಮಣ್ಣು-ನೀರಿನ ನಿರ್ವಹಣೆಗೆ ಒತ್ತು ನೀಡಬೇಕಿದೆ. ನಮ್ಮ ವಿವಿಯ ವಿದ್ಯಾರ್ಥಿಗಳು ನವೋದ್ಯಮ ಆರಂಭಿಸಲು ಪ್ರೋತ್ಸಾಹಧನ ನೀಡಲು ಚಿಂತನೆ ನಡೆದಿದೆ.
- ಡಾ. ಎಸ್.ವಿ. ಸುರೇಶ್, ಬೆಂಗಳೂರು ಕೃಷಿ ವಿವಿಯ ಕುಲಪತಿ