

ಯಲಬುರ್ಗಾ: ವಿಶ್ವ ಮಟ್ಟದಲ್ಲಿ ಇನ್ನರ್‌ವ್ಹೀಲ್ ಕ್ಲಬ್‌ನಿಂದ ಅನೇಕ ರೀತಿಯ ಸಮಾಜಮುಖಿ ಕಾರ್ಯ ಮಾಡಲಾಗಿದೆ ಎಂದು ಜಿಲ್ಲಾ ಇನ್ನರ್‌ವ್ಹೀಲ್ ಕ್ಲಬ್ ಸಂಪಾದಕಿ ಡಾ.ಪಾರ್ವತಿ ಪಳೋಟಿ ಹೇಳಿದರು.
ಪಟ್ಟಣದ ಶಿಕ್ಷಕರ ಗುರು ಭವನದಲ್ಲಿ ಹಮ್ಮಿಕೊಂಡಿದ್ದ ಇನ್ನರ್‌ವ್ಹೀಲ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶ-ವಿದೇಶಗಳಲ್ಲಿ ಇನ್ನರ್‌ವ್ಹೀಲ್ ಕ್ಲಬ್ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸುವ ಜತೆಗೆ ಸಮಾಜದಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಮಹಿಳೆಯರು ಸ್ವಾವಲಂಬಿಯಾಗಿ ತಮ್ಮ ಬದುಕನ್ನು ಕಟ್ಟಿಕೊಂಡು ಸಮಾಜದಲ್ಲಿ ಸದೃಢವಾಗಿ ಬೆಳೆಯಲು ಇಂಥ ಸಂಸ್ಥೆಗಳು ಸಹಕಾರಿಯಾಗಿವೆ ಎಂದರು.
ಕ್ಲಬ್‌ನ ನೂತನ ಅಧ್ಯಕ್ಷೆ ಕೀರ್ತಿ ಜಕ್ಕಲಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ನಾರಿಯರಿಗೆ ಪ್ರೇರಕವಾಗಿದೆ. ನಮ್ಮ ಅವಧಿಯಲ್ಲಿ ಕ್ಲಬ್‌ನಿಂದ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಸಮಾಜದಲ್ಲಿ ಕಟ್ಟಕಡೇ ಮಹಿಳೆಯರನ್ನು ಮುಂದೆ ತರುವ ಕೆಲಸ ಮಾಡಲಾಗುವುದು. ಆತ್ಮವಿಶ್ವಾಸ, ದೃಢ ಸಂಕಲ್ಪದಿಂದ ಮಹಿಳೆಯರು ಮುಂದೆ ಬರಬೇಕು ಎಂದರು.
ನಿಕಟಪೂರ್ವ ಅಧ್ಯಕ್ಷೆ ಚೆನ್ನಮ್ಮ ಪಾಟೀಲ್ ನೂತನ ಅಧ್ಯಕ್ಷೆಗೆ ಅಧಿಕಾರ ಹಸ್ತಾಂತರ ಮಾಡಿದರು. ಜಿಪಂ ಮಾಜಿ ಸದಸ್ಯೆ ಶಕುಂತಲಾ ದೇವಿ ಮಾಲಿಪಾಟೀಲ್, ಪಪಂ ಸದಸ್ಯೆ ಡಾ.ನಂದಿತಾ ಶಿವನಗೌಡ ದಾನರಡ್ಡಿ, ಕ್ಲಬ್ ಪದಾಧಿಕಾರಿಗಳಾದ ಲತಾ ಕಲ್ಯಾಣಿ, ಸವಿತಾ ಓಜನಹಳ್ಳಿ, ಶಾರದಾ ಕೊಣ್ಣೂರು, ಜ್ಯೋತಿ ಪಲ್ಲೇದ, ಶೋಭಾ ಬೇಲೇರಿ ಇತರರಿದ್ದರು.