ಇನ್ನರ್ ವೀಲ್ ಜಿಲ್ಲಾಧ್ಯಕ್ಷೆಯಾಗಿ ಪೂರ್ಣಿಮಾ ರವಿ ಅಧಿಕಾರ ಸ್ವೀಕಾರ

12mdk12
Published on

ಮಡಿಕೇರಿ:

ಇನ್ನರ್ ವೀಲ್ ಜಿಲ್ಲೆ ೩೧೮ ಅಧ್ಯಕ್ಷೆಯಾಗಿ ಮಡಿಕೇರಿಯ ಪೂರ್ಣಿಮಾ ರವಿ ಅಧಿಕಾರ ಸ್ವೀಕರಿಸಿದರು. ಮೈಸೂರಿನಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಮಡಿಕೇರಿಯ ಹೆಸರಾಂತ ವೈದ್ಯ ಡಾ.ರವಿ ಅಪ್ಪಾಜಿ ಅವರ ಪತ್ನಿ ಪೂರ್ಣಿಮಾ ರವಿ ಅವರು ಭಾರತೀಯ ಇನ್ನರ್ ವೀಲ್ ಸಂಸ್ಥೆಯ ಅಸೋಸಿಯೇಷನ್ ಅಧ್ಯಕ್ಷೆ ಪ್ರೀತಿ ಗುಗ್ನಾನಿ ಅವರಿಂದ ಅಧಿಕಾರ ಪಡೆದರು.

ಈ ಸಂದರ್ಭ ಮಾತನಾಡಿದ ಪ್ರೀತಿ ಗುಗ್ನಾನಿ, ಇನ್ನರ್ ವೀಲ್ ಸಂಸ್ಥೆ ಈ ವರ್ಷ ಭಾರತದಾದ್ಯಂತ ರೂಪಿಸಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಇನ್ನರ್‌ವೀಲ್ ಸದಸ್ಯೆಯರು ಕಾರ್ಯನಿರ್ವಹಿಸುವಂತೆಯೂ ಕರೆ ನೀಡಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಪೂರ್ಣಿಮಾ ರವಿ, ಹಲವಷ್ಟು ಮಾಜಿ ಅಧ್ಯಕ್ಷೆಯರು ಇನ್ನರ್ ವೀಲ್ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಸಹಕಾರ ನೀಡಿದ್ದಾರೆ. ಈ ವರ್ಷ ಶಿಕ್ಷಣ, ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಷ್ಟು ಯೋಜನೆಗಳನ್ನು ಜಿಲ್ಲೆಯಾದ್ಯಂತ ಜಾರಿಗೊಳಿಸಲಾಗುತ್ತದೆ. ಹಾಗೇ ಈ ವರ್ಷದಲ್ಲಿ ಪೇಪರ್ ಬಳಕೆ ಮಾಡದೇ ಪೇಪರ್ ರಹಿತವಾಗಿ ಕಾರ್ಯಯೋಜನೆ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದರು.

ಇನ್ನರ್ ವೀಲ್ ಜಿಲ್ಲೆ ೩೧೮ ಕೊಡಗು, ಮೈಸೂರು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಉಡುಪಿ, ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನೊಳಗೊಂಡಿದ್ದು, ೫೦ ಕ್ಲಬ್‌ಗಳ ಮೂಲಕ ೧೮೦೦ ಸದಸ್ಯೆಯರನ್ನು ಹೊಂದಿದೆ. ಶತಮಾನೋತ್ಸವ ಸಂಭ್ರಮದಲ್ಲಿರುವ ಇನ್ನರ್ ವೀಲ್ ಜಿಲ್ಲೆ ೩೧೮ ಈ ಸಾಲಿನಲ್ಲಿ ಬೆಳಕನ್ನು ಪ್ರಜ್ವಲಿಸು ಎಂಬ ಧ್ಯೈಯವಾಕ್ಯವನ್ನು ಹೊಂದಿದೆ. ಡಿಸೆಂಬರ್ ನಲ್ಲಿ ಇನ್ನರ್ ವೀಲ್ ಜಿಲ್ಲಾ ಸಮ್ಮೇಳನ ಮಡಿಕೇರಿಯಲ್ಲಿ ಆಯೋಜಿತವಾಗಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯಿಂದ ಮಿನ್ನಿ ಬೋಪಯ್ಯ, ಪ್ರೇಮಕಾಳಪ್ಪ ಕೆಲವು ವರ್ಷಗಳ ಮೊದಲು ಇನ್ನರ್ ವೀಲ್ ಜಿಲ್ಲಾಧ್ಯಕ್ಷರಾಗಿದ್ದು, ಇದೀಗ ಪೂರ್ಣಿಮಾ ರವಿ ಕೊಡಗಿನಿಂದ ಮೂರನೇ ಅಧ್ಯಕ್ಷೆಯಾಗಿ ಇನ್ನರ್ ವೀಲ್ ಜಿಲ್ಲೆಗೆ ನೇಮಕವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net