ಬಹಿರಂಗದೊಂದಿಗೆ ಅಂತರಂಗದ ಶುದ್ಧಿ ಇರಲಿ

DSC_7236-03
Published on

ಚಿತ್ರದುರ್ಗ: ನಾವು ಎಂತಹ ಜನರ ಒಡನಾಟದಲ್ಲಿ ಇದ್ದೇವೆ ಎಂಬುದನ್ನು ಅವಲಂಬಿಸಿ ನಮ್ಮ ವ್ಯಕ್ತಿತ್ವ ರೂಪಗೊಳ್ಳುತ್ತದೆ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ‌್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕಬೀರಾನಾಂದಶ್ರಮದಲ್ಲಿ ಗುರುವಾರ ಮಹಾ ಶಿವರಾತ್ರಿ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಜ್ಜನರ ಸಹವಾಸದಿಂದ ಹಸನಾಗುವ ಬದುಕು ದುರ್ಜನರ ಸಂಗದಿಂದ ಕನಿಷ್ಠವಾಗುತ್ತದೆ ಎಂದು ತಿಳಿಸಿದರು.

ಮನುಷ್ಯ ಜನ್ಮ ಶ್ರೇಷ್ಠ. ಆದರದು ಶ್ರೇಷ್ಠ ಅಥವಾ ಕನಿಷ್ಠವೋ ಎಂಬುದು, ಆತನ ಸ್ವಭಾವ, ವಿವೇಕವನ್ನು ಅವಲಂಬಿಸಿದೆ ಎಂದರು. ನಮ್ಮ ಒಡನಾಟದಲ್ಲಿರುವವರ ಗುಣಗಳು ನಮಗೆ ಬರುತ್ತೇವೆ. ಕಾರ್ಕೋಟಕ ವಿಷದ ಹಾವುಗಳಾಗಿರುವ ದುರ್ಜನರು, ದುರ್ವ್ಯಸನಿಗಳ ಸಹವಾಸ ಕೊಳಚೆ ಇದ್ದಂತೆ. ಯಾರು ಒಳ್ಳೆಯವರು, ಕೆಟ್ಟವರೆಂದು ಅಳೆಯವುದು ಕಷ್ಟ. ಬಹಿರಂಗ ಶುದ್ಧಿ ಜತೆ ಅಂತರಂಗದ ಶುದ್ಧಿಯೂ ಬೇಕು ಎಂದು ತಿಳಿಸಿದರು.

ಪ್ರಪಂಚದ ಶ್ರೇಷ್ಠ ದಾರ್ಶನಿಕರ ಆಶಯದಂತೆ ಬದ್ಧತೆ, ಪ್ರಾಮಾಣಿಕತೆ, ನಿಷ್ಠೆಯಿಂದ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಹೊತ್ತು ಬಂದಾಗ ಕೊಡೆ ಹಿಡಿಯುವವರ ಸಂಖ್ಯೆ ಇಂದು ಅಧಿಕವಿದೆ. ಮೌಢ್ಯ ನಿರಾಕರಣೆ, ಜಾತಿ, ವರ್ಗ ರಹಿತ, ಲಿಂಗ-ಭೇದವಿಲ್ಲದ ಸಮ ಸಮಾಜದ ನಿರ್ಮಾಣದ ಕನಸನ್ನು ಕಂಡಿದ್ದ ಬಸವಣ್ಣ, ತನ್ನ ಈ ಹೋರಾಟದಲ್ಲಿ ಯಶಸ್ವಿ ಕೂಡ ಆದರು. ಆದರೆ, ಪಟ್ಟಭದ್ರರು ಇದನ್ನು ಸಹಿಸಿ ಕೊಳ್ಳಲಿಲ್ಲ ಎಂದು ಹೇಳಿದರು.

ಇಂಥವರ ಈ ಪ್ರವೃತ್ತಿ ಇಂದಿಗೂ ಮುಂದುವರಿದಿದೆ. ಇದರಿಂದಾಗಿ ಇಂದು ಎಷ್ಟೋ ಮಠಗಳ ಸ್ಥಿತಿ ಏನಾಗಿದೆ ಎಂದು ಪ್ರಶ್ನೀಸಿದ ಶ್ರೀಗಳು, ವಾಸ್ತು, ಜ್ಯೋತಿಷ್ಯ ನೋಡುತ್ತೀರಿ. ಆದರೆ ವಾಸ್ತು ತಜ್ಞರೊಬ್ಬರ ಸ್ಥಿತಿ ಏನಾಯಿತು? ಇಂಥ ಮೌಢ್ಯವನ್ನು ಶರಣರು ವಿರೋಧಿಸಿದ್ದರು ಎಂದರು.

ಜ್ಞಾನವನ್ನು ಬಳಸಿಕೊಂಡು ಆಜ್ಞಾನಗಳಿಂದ ಹೊರ ಬರಬೇಕಿದೆ. ವಿಘ್ನಗಳು ಬಂದಾಗ ತಾಳ್ಮೆ ಕಳೆದು ಕೊಳ್ಳಬಾರದು. ಪ್ರತಿ ರಾತ್ರಿ ಕೂಡ ಶಿವರಾತ್ರಿ ಆಗಬೇಕು. ಪ್ರತಿ ಉಸಿರಿನಲ್ಲೂ ಶಿವನ ಸ್ಮರಣೆ ಇದ್ದರೆ ಮನುಷ್ಯನೂ ಮಹಾದೇವನಾಗುತ್ತಾನೆ ಎಂದು ಹೇಳಿದರು.

ಸೊಲ್ಲಾಪುರದ ರಾಮಚಂದ್ರಣ್ಣ ಮೇತ್ರೆ ಮಾತನಾಡಿ, ಎಲ್ಲರ ಹೃದಯದಲ್ಲೂ ಪರಮಾತ್ಮ ಪ್ರೇಮವನ್ನು ತುಂಬಿದ್ದಾನೆ. ಸಾಕಷ್ಟು ಸಂಪತ್ತು, ಭೌತಿಕ ಸುಖವಿದ್ದರೂ ಜೀವನಕ್ಕೆ ಗುರುವಿನ ಮಾರ್ಗದರ್ಶನ ಬೇಕು. ಅಜ್ಞಾನಿಗೆ ಜೀವನದಲ್ಲಿ ಯಶಸ್ಸು ಸಿಗದು ಎಂದರು.

ಸಂಗದರಿಯ ಗುರುನಾಥ ಮಹಾರಾಜ್ ಮಾತನಾಡಿ, ಪವಿತ್ರವಾದ ಶಿವರಾತ್ರಿ, ನವರಾತ್ರಿ ಮಹೋತ್ಸವದ ಮಹತ್ವವನ್ನು ಅರಿಯಬೇಕು ಎಂದು ತಿಳಿಸಿದರು.  ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ರಾಜರಾಮ ಸ್ವಾಮೀಜಿ, ಶ್ರೀ ಮಾಧವಾನಂದ ಸ್ಚಾಮೀಜಿ, ಶ್ರೀ ಶಮಾನಂದ ಸ್ವಾಮೀಜಿ, ಮಾಜಿ ಸಂಸದ ಜನಾರ್ದನಸ್ವಾಮಿ, ಉತ್ಸವ ಸಮಿತಿ ಅಧ್ಯಕ್ಷ ಜಿ.ಎಸ್.ಅನಿತ್‌ಕುಮಾರ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿದ್ದೇಶ್‌ಯಾದವ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ನಗರಸಭೆ ಸದಸ್ಯರಾದ ನಾಗರಾಜ್, ಕೃಷ್ಣಮೂರ್ತಿ, ರಮೇಶ್‌ಆಚಾರ್, ಶಶಿಕುಮಾರ್, ಮದಕರಿ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್, ಕಲಾವಿದರಾದ ದಿವ್ಯಾ ರಾಮಚಂದ್ರ, ಜಿ.ಮೆಹಬೂಬ್, ದಾಸೋಹಿ ದಿವ್ಯಾಸರಸ್ವತಿ, ಆಶಾ ರಘುಆಚಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net