

ಕಡೂರು: ಅಂತರಂಗದ ಬೆಳಕು ಇಲ್ಲದಿದ್ದರೆ ಬಹಿರಂಗದ ಬೆಳಕಿಗೆ ಬೆಲೆಯಿಲ್ಲ. ಮತ್ತೆ ಕಲ್ಯಾಣದ ಮೂಲಕ ಅಂತರಂಗದ ಬೆಳಕನ್ನು ಕಂಡುಕೊಳ್ಳಬೇಕು ಎಂದು ಸಾಣೇಹಳ್ಳಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೆ.ಹೊಸಳ್ಳಿ ಗಂಗಾಂಬಿಕಾ ಕಲ್ಯಾಣ ಮಂಟಪದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಗುರುವಾರ ಏರ್ಪಡಿಸಿದ್ದ ಶ್ರಾವಣ ಸಂಜೆ ಮತ್ತೆ ಕಲ್ಯಾಣ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.
ಬಹಿರಂಗದ ಬೆಳಕಿಗಿಂತ ಅಂತರಂಗದ ಬೆಳಕು ಮುಖ್ಯವಾಗಲಿದೆ. ನಿಜವಾದ ಬೆಳಕು ಅಂತರಂಗದಿಂದ ಜ್ಞಾನರ್ಜನೆಯಾಗಲಿದೆ. 12ನೇ ಶತಮಾನದ ಶರಣರು ಶಾಲಾ ಕಾಲೇಜಿಗೆ ಹೋದವರಲ್ಲ. ಅವರ ವಿಚಾರಗಳನ್ನು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಶರಣರ ನುಡಿಗಳು ಹೃದಯದ ಮಾತಾಗಿ ಪರಿವರ್ತನೆಗೊಂಡಿದ್ದವು. ಅಂಥ ಹೃದಯದ ಭಾವದಿಂದ ಹುಟ್ಟಿಕೊಂಡಿದ್ದೇ ವಚನ ಸಾಹಿತ್ಯ. ಎಲ್ಲ ಶರಣರೂ ನುಡಿದಂತೆ ನಡೆದರು. ನಡೆದಂತೆ ನುಡಿದರು. ಮತ್ತೆ ಕಲ್ಯಾಣ ಕಾರ್ಯಕ್ರಮದ ಮೂಲಕ ಅರಿವಿನ ಕೆಲಸವನ್ನು ಕಸಾಪ ಘಟಕಗಳು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕಸಾಪ ಬೆಳೆಯಲು ಮತ್ತಷ್ಟು ಒತ್ತು ನೀಡಬೇಕು ಎಂದರು.
ಯಳನಡು ಮಠದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸವಿತಾ ಸತ್ಯನಾರಾಯಣ್, ನಾಗಶ್ರೀ ತ್ಯಾಗರಾಜ್, ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಎಚ್.ಎಂ.ಲೋಕೇಶ್, ಎಚ್.ವಿ.ಗಿರೀಶ್, ಮುಗುಳಿ ಲಕ್ಷ್ಮೀದೇವಮ್ಮ, ಕಸಾಪ ತಾಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಲತಾ ರಾಜಶೇಖರ್, ಬಿ.ಎಚ್.ಸೋಮಶೇಖರ್, ಬಿ.ಚಂದ್ರಶೇಖರ್, ಆರ್.ಜಿ.ಕೃಷ್ಣ್ಣಸ್ವಾಮಿ, ಕುಪ್ಪಾಳು ಶಾಂತಮೂರ್ತಿ, ಗಾಯತ್ರಮ್ಮ ಇತರರಿದ್ದರು.