ಸೀಬರ್ಡ್ ಮೂಲ ಸೌಕರ್ಯ ಕಾಮಗಾರಿಗಳ ಉದ್ಘಾಟನೆ ಏ.9 ಕ್ಕೆ

Project seebard innaguretion
Published on

ಕಾರವಾರ: ಸೀಬರ್ಡ್ ನೌಕಾ ಯೋಜನೆಯ ಎರಡನೇ ಹಂತದ ವಿಸ್ತರಣೆಯ ಭಾಗವಾಗಿ ಸಿದ್ಧಗೊಂಡಿರುವ ಕೆಲವು ಮೂಲ ಸೌಕರ್ಯಗಳ ಉದ್ಘಾಟನಾ ಕಾರ್ಯಕ್ರಮವು ಏ.9 ರಂದು ನಡೆಯಲಿದೆ.
ಭಾರತೀಯ ನೌಕಾಸೇನೆಯ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಹಡಗುಗಳ ನಿಲ್ದಾಣ(ಅಪ್‌ಶೋರ್ ಪೆಟ್ರೋಲ್ ವೇಸಲ್ ಪೇರ್) ಹಾಗೂ ವಸತಿ ಸಮುಚ್ಛಯಗಳ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಲಾಗಿದೆ. ಆದರೆ, ಎಲ್ಲಿಂದ ಹಾಗೂ ಯಾವ ಸ್ವರೂಪದಲ್ಲಿ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿವೆ ಎಂಬ ಬಗ್ಗೆ ನೌಕಾಸೇನೆ ಇದುವರೆಗೂ ಮಾಹಿತಿ ನೀಡಿಲ್ಲ.
ಅಂದಾಜು 13 ಸಾವಿರ ಕೋಟಿ ರೂ. ವೆಚ್ಚದ ಸೀಬರ್ಡ್ ನೌಕಾ ಯೋಜನೆಯ ಎರಡನೇ ಹಂತದ ವಿಸ್ತರಣೆ ಕಾಮಗಾರಿಗಳು 2014 ರಲ್ಲಿ ಪ್ರಾರಂಭವಾಗಿದ್ದವು. ಈಗ ವಿವಿಧ ಕಾಮಗಾರಿಗಳು ಮುಕ್ತಾಯವಾಗಿದ್ದು, ಇನ್ನಷ್ಟು ನಿರ್ಮಾಣ ಹಂತದಲ್ಲಿವೆ. ಕಳೆದ ಮಾರ್ಚ್ 5 ರಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಗೋವಾದಿಂದಲೇ ಕಾರವಾರದ ಕೆಲವು ಮೂಲ ಸೌಕರ್ಯಗಳನ್ನು ಉದ್ಘಾಟನೆ ಮಾಡಿದ್ದರು. ಇನ್ನಷ್ಟು ಮೂಲ ಸೌಕರ್ಯಗಳು ಈಗ ಏ.9 ರಂದು ಉದ್ಘಾಟನೆಗೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.

ಏನೇನು ಸೌಲಭ್ಯ:

ಯುದ್ಧ ವಿಮಾನ ಸಾಗಿಸಬಲ್ಲ ವಿಕ್ರಮಾದಿತ್ಯ ನೌಕೆಯನ್ನು ನಿಲ್ಲಿಸಬಲ್ಲ ಪ್ರತ್ಯೇಕ ದಕ್ಕೆ,ಸಹಾಯಕ ನೌಕೆಗಳನ್ನು ನಿಲ್ಲಿಸಲು ಪ್ರತ್ಯೇಕ ದಕ್ಕೆ, ಆಂಬುಲೆನ್ಸ್ ರ‍್ಯಾಂಪ್, ನೀರನ್ನು ಖಾಲಿ ಮಾಡಿ, ಜಲಾಂತರ್ಗಾಮಿಗಳು, ಯುದ್ಧ ನೌಕೆಗಳನ್ನು ದುರಸ್ತಿ ಮಾಡಬಹುದಾಗಿದ್ದ 75 ಮೀಟರ್ ಆಳದ 33 ಸಾವಿರ ಚದರ ಅಡಿ ವಿಸ್ತೀರ್ಣದ ವ್ಯವಸ್ಥೆಗಳು, 320 ಮನೆಗಳಿರುವ 7 ವಸತಿ ಸಮುಚ್ಛಯಗಳು, ಹೊಸ ನೌಕಾ ಹಡಗು ದುರಸ್ತಿ ಪ್ರಾಂಗಣ, ಶಸ್ತಾçಸ್ತçಗಳನ್ನು ಹಾಗೂ ಇತರ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸುವ ವ್ಯವಸ್ಥೆ ಮುಂತಾದವುಗಳನ್ನು ತಿಂಗಳ ಹಿಂದೆ ಉದ್ಘಾಟಿಸಲಾಗಿತ್ತು.
ಸೀಬರ್ಡ್ನ ಎರಡನೇ ಹಂತದಲ್ಲಿ ವಿಮಾನ ನಿಲ್ದಾಣ ಹಾಗೂ ಆಧುನಿಕ ಸಂಪರ್ಕ ವ್ಯವಸ್ಥೆ ಸೇರಿ ಇನ್ನೂ ಹಲವು ಸೌಕರ್ಯಗಳು ಸೇರಿದ್ದು, ಅವುಗಳ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಒಟ್ಟಾರೆ 10 ಸಾವಿರ ಸಿಬ್ಬಂದಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಈ ಎಲ್ಲ ಕಾಮಗಾರಿಗಳು ಪೂರ್ಣವಾದ ನಂತರ 32 ಪ್ರಮುಖ ಯುದ್ಧ ನೌಕೆಗಳು ಹಾಗೂ ಜಲಾಂತರ್ಗಾಮಿಗಳು ಕಾರವಾರದಲ್ಲಿ ನೆಲೆ ನಿಲ್ಲಲಿವೆ. 7 ಸಾವಿರ ಜನರು ನೇರವಾಗಿ ಹಾಗೂ ಸುಮಾರು 20 ಸಾವಿರ ಜನರು ಪರೋಕ್ಷವಾಗಿ ಉದ್ಯೋಗ ಕಂಡುಕೊಳ್ಳುವರು ಎಂದು ನೌಕಾಸೇನೆಯ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net