

ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ವಿಶೇಷ ಪರಿಶೀಲನಾ ಕಾರ್ಯಾಚರಣೆ ನಡೆಸಿದ ಬೆಳಗಾವಿ ಪೊಲೀಸರು, ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ರೌಡಿಶೀಟರ್ ಫ್ರೂಟ್ ಇರ್ಫಾನ್ ಕೊಲೆ ಪ್ರಕರಣದ ಆರೋಪಿ ಧಾರವಾಡದ ತೌಸಿಫ್ ನಿಪ್ಪಾಣಿ ಇಲ್ಲಿನ ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಯುವತಿಗೆ ಕರೆ ಮಾಡಿ ಬೆದರಿಸಿ, ಲಕ್ಷಾಂತರ ರೂ. ಪಡೆದಿರುವ ಬಗ್ಗೆ ‘ವಿಜಯವಾಣಿ’ ಶುಕ್ರವಾರದಂದು ‘ಹಿಂಡಲಗಾ ಜೈಲಿನಿಂದಲೇ ಬೆದರಿಸಿ ಸುಲಿಗೆ !’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು.
ಸುದ್ದಿಯಿಂದ ಎಚ್ಚೆತ್ತುಕೊಂಡ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್ ಅವರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ವಿಕ್ರಂ ಆಮ್ಟೆ ನೇತೃತ್ವದಲ್ಲಿ ಇಬ್ಬರು ಡಿಸಿಪಿ, 8 ಸಿಪಿಐ, 8 ಪಿಎಸ್‌ಐ ಹಾಗೂ 55 ಸಿಬ್ಬಂದಿಯನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದರು. ಪೊಲೀಸ್ ಅಧಿಕಾರಿಗಳು ಹಿಂಡಲಗಾ ಕಾರಾಗೃಹಕ್ಕೆ ಶುಕ್ರವಾರ ಮಧ್ಯಾಹ್ನ ಏಕಾಏಕಿ ಭೇಟಿ ನೀಡಿ, ಪರಿಶೀಲಿಸಿದಾಗ ಜೈಲ್ ಒಳಭಾಗದ ಕಾಂಪೌಂಡ್ ಪಕ್ಕದಲ್ಲಿ ಮೊಬೈಲ್ ಸಿಕ್ಕಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಲವು ತಿಂಗಳಿಂದ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಇತ್ತೀಚೆಗೆ ವಿಡಿಯೋ ಕಾಲ್(ಕಾನ್ಫರನ್ಸ್) ಮೂಲಕ ಧಾರವಾಡ ಜಿಲ್ಲೆಯ ಓರ್ವ ಶಾಸಕ ಸೇರಿದಂತೆ ತಮ್ಮ ಕ್ಷೇತ್ರದ ಮುಖಂಡರ ಜತೆ ಮಾತುಕತೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದೀಗ ಜೈಲಲ್ಲಿ ಮೊಬೈಲ್ ದೊರೆತಿರುವುದು ಮತ್ತಷ್ಟು ಅನುಮಾನ ಹುಟ್ಟುಹಾಕಿದೆ. ಹಿಂಡಲಗಾ ಕಾರಾಗೃಹದಲ್ಲಿರುವ ಹಲವು ಪ್ರಭಾವಿ ಆರೋಪಿಗಳಿಗೆ ಸ್ವತಹ ಜೈಲು ಅಧಿಕಾರಿಗಳೇ ಮೊಬೈಲ್ ಬಳಸಲು ಸಹಕಾರ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.