

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ನಗರದಲ್ಲಿ ಸೋಮವಾರ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.
ವಾರ್ಡ್ ಸಂ.44ರ ವ್ಯಾಪ್ತಿಯ ಮಹದೇಶ್ವರ ದೇವಸ್ಥಾನ ಆವರಣ, ವಾರ್ಡ್ ಸಂ.45ರ ವ್ಯಾಪ್ತಿಯ ನಿವೇದಿತಾನಗರ, ಶಾರದಾದೇವಿನಗರ, ವಾರ್ಡ್ ಸಂ.46 ದಟ್ಟಗಳ್ಳಿ, ರಾಮಕೃಷ್ಣನಗರ ಭಾಗಗಳಿಗೆ ಭೇಟಿ ನೀಡಿ ಜನ ಸಂಪರ್ಕ ಸಭೆ ಮಾಡಿ ಮತಯಾಚನೆ ಮಾಡಿದರು.
ಎಂ.ಲಕ್ಷ್ಮಣ್ ಮಾತನಾಡಿ, ದೇಶದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಬಣ್ಣ ಬಣ್ಣದ ಮಾತು ಹಾಡಿ ನಂತರದಲ್ಲಿ ಯುವಕರಿಗೆ ಕೆಲಸ ಸಿಗದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಹಿಂದಿಯವರನ್ನು ತಂದಿದ್ದಾರೆ. ಸ್ಥಳೀಯ ಯುವಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಲು ಯಾರೂ ಇಲ್ಲ. ಹೀಗಾಗಿ ಜನರು ಬದಲಾವಣೆ ತರಬೇಕು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ನಾವು ಚುನಾವಣೆ ಸಂದರ್ಭದಲ್ಲಿ ಮಾತ್ರ ಭರವಸೆ ಕೊಟ್ಟು ಹೋಗುವವರಲ್ಲ ಅದನ್ನು ಜಾರಿ ಮಾಡುವವರು ಎಂದರು.
ಸಿಎಂ ಸಿದ್ದರಾಮಯ್ಯ ಅವರ ಕೊಡುಗೆಗಳು ಮನೆ ಮನೆಗೂ ಭಿತ್ತಿಪತ್ರಗಳ ಮೂಲಕ ತಲುಪಬೇಕು. ನಾವು ಕೆಲಸ ಮಾಡಿದ್ದೇವೆ ದಯಮಾಡಿ ನಿಮ್ಮ ಬಳಿ ಕೂಲಿ ಕೇಳುತ್ತಿದ್ದೇವೆ. ಹೀಗಾಗಿ ನನಗೊಂದು ಅವಕಾಶ ಮಾಡಿಕೊಡಿ ಎಂದು, ಪಕ್ಷದ 5 ನ್ಯಾಯ ಯೋಜನೆಗಳ ಭಿತ್ತಿಪತ್ರ ತೋರಿಸಿ ಮತ ಯಾಚಿಸಿದರು.
ಮೈಸೂರು ಅಭಿವೃದ್ಧಿಗೆ ನಾನೊಂದು ಪ್ರಣಾಳಿಕೆ ತಂದಿದ್ದೇನೆ. ಜನರ ಪರ ನಿಂತು ಕೆಲಸ ಮಾಡುವುದಕ್ಕೆ ಈ ಬಾರಿ ನನಗೆ ಅವಕಾಶ ಕೊಡಿ. ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್ ನೀಡಿದೆ ಎಂದರು.