ಅರಣ್ಯ ಸಂರಕ್ಷಣೆ ನೆಪದಲ್ಲಿ ಆದಿವಾಸಿಗಳಿಗೆ ಅನ್ಯಾಯ

ಹುಣಸೂರು ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದಿವಾಸಿ ಹಿರಿಯ ಮುಖಂಡ ವಿಠಲ್ ನಾಣಾಚ್ಚಿ ಮಾತನಾಡಿದರು. ಕೊಳವಿಗೆ ಜಯಪ್ಪ, ಹರ್ಷ, ಲಕ್ಷ್ಮೀ ಇತರರು ಇದ್ದರು.
ಹುಣಸೂರು ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದಿವಾಸಿ ಹಿರಿಯ ಮುಖಂಡ ವಿಠಲ್ ನಾಣಾಚ್ಚಿ ಮಾತನಾಡಿದರು. ಕೊಳವಿಗೆ ಜಯಪ್ಪ, ಹರ್ಷ, ಲಕ್ಷ್ಮೀ ಇತರರು ಇದ್ದರು.
Published on

ಹುಣಸೂರು: ನಗರದ ಡೀಡ್ ಸಂಸ್ಥೆ ಆವರಣದಲ್ಲಿ 31ನೇ ಅಂತಾರಾಷ್ಟ್ರೀಯ ಆದಿವಾಸಿ ದಿನವನ್ನು ಆದಿವಾಸಿ ಪಾರ್ಲಿಮೆಂಟ್ ಸಮಿತಿ ಸಹಯೋಗದಲ್ಲಿ ಶನಿವಾರ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಆದಿವಾಸಿ ಹಿರಿಯ ಮುಖಂಡ ವಿಠಲ್ ನಾಣಾಚ್ಚಿ, ಸರ್ಕಾರಗಳು ಅರಣ್ಯ ಸಂರಕ್ಷಣೆ ಹೆಸರಿನಲ್ಲಿ ಆದಿವಾಸಿಗಳ ಬದುಕನ್ನು ಹಾಳು ಮಾಡಿದೆ. ಹೈ ಕೋರ್ಟ್ ಆದೇಶ ಪಾಲಿಸದೆ 3418 ಆದಿವಾಸಿ ಕುಟುಂಬಗಳು ನರಳಿ ನರಳಿ ಜೀವ ಬಿಡುವಂತಾಗಿದೆ. ಕೋರ್ಟ್ ಆದೇಶವನ್ನೂ ಪಾಲಿಸದ ಸರ್ಕಾರ ಮತ್ತೇನು ಮಾಡುತ್ತಿದೆ. ಜಿಲ್ಲಾಧಿಕಾರಿ ಇನ್ನಿತರ ಅಧಿಕಾರಿಗಳು ಶಿಫಾರಸ್ಸು ಮಾಡಿ ಪುನರ್ವಸತಿಗೆ ಮಾರ್ಗಸೂಚಿ ನೀಡಿದ್ದರೂ ಮುಖ್ಯ ಮಂತ್ರಿಗಳು ಸರ್ಕಾರದ ಆದೇಶ ಹೊರಡಿಸದೆ ನಮಗೆ ಅನ್ಯಾಯ ಮಾಡುತ್ತಿದೆ. ಈಗಲಾದರೂ ಗಮನಹರಿಸಲಿ ಎಂದು ಆಗ್ರಹಿಸಿದರು.

ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ನಮ್ಮಪರ ಇದ್ದರೂ ಹಕ್ಕು ಮಾನ್ಯ ಮಾಡದೆ ಹಕ್ಕು ತಿರಸ್ಕರಿಸಿರುವುದು, ನಮ್ಮ ಮೇಲಿನ ದೌರ್ಜನ್ಯವಾಗಿದೆ. ವಿಧಾನ ಪರಿಷತ್‌ಗೆ 2 ಆದಿವಾಸಿ ನಾಯಕರು ನೇಮಕವಾಗಲಿ. ಅರಣ್ಯ ಹಕ್ಕು ನೀಡಲಿ. ಕಾಡಿಂದ ಹೊರ ಹಾಕಿರುವವರಿಗೆ ಪುನರ್ವಸತಿ ನೀಡಲಿ. ಆದಿವಾಸಿಗಳಿಗೆ ಪ್ರತ್ಯೇಕ ಪಂಚಾಯತ್ ರಚಿಸಲಿ, ನಾಗರಿಕ ಸಮಾಜದಲ್ಲಿ ಬೆರೆತು ಬಾಳಲು ನಗರದಲ್ಲಿ ಒಂದು ಹಾಡಿ ಯೋಜನೆ ಜಾರಿಗೆ ತರಲಿ. ಆದಿವಾಸಿ ಅಭಿವೃದ್ಧಿ ಮಂಡಳಿಯನ್ನು ಮುಖ್ಯಮಂತ್ರಿ ಒಪ್ಪಿರುವಂತೆ ರಚಿಸಲಿ. ಅಂತರಾಷ್ಟ್ರೀಯ ಆದಿವಾಸಿ ದಿನದ ಘೋಷಣೆಯನ್ನು ಕರ್ನಾಟಕ ಸರ್ಕಾರ ಶ್ರದ್ಧೆಯಿಂದ ಪಾಲಿಸಿ ಆದಿವಾಸಿ ಹಕ್ಕು, ಬದುಕು ರಕ್ಷಿಸಲಿ ಎಂದು ಆಗ್ರಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ ಮಾತನಾಡಿ, ಅಕ್ಟೋಬರ್ 2ರಿಂದ ನವೆಂಬರ್ 15ರವರೆಗೆ ಕಾಡು ಪ್ರವೇಶ, ಪೂಜಾ ಸ್ಥಳ, ಸ್ಮಶಾನ ಭೇಟಿ, ಕಾಡಿನ ಕಿರು ಸಂಪನ್ಮೂಲ ಸಂಗ್ರಹ, ಕಚೇರಿಗಳ ಮುಂದೆ ಧರಣಿ ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದ ಅವರು, ಹೈ ಕೋರ್ಟ್ ಆದೇಶ ಜಾರಿಗೆ ಸರ್ಕಾರ ತೀರ್ಮಾನಿಸದಿದ್ದರೆ ನ್ಯಾಯಾಲಯ ನಿಂದನೆ ದಾವೆ ಹೂಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು

ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮೀ ಮಾತನಾಡಿದರು. ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಈ ವರ್ಷದ ಆದಿವಾಸಿ ದಿನಾಚರಣೆಯ ಘೋಷವಾಕ್ಯವನ್ನು ವಿವರಿಸಿದರು. ವಿವಿಧ ಹಾಡಿಗಳ ಮುಖಂಡರು, ಮಾನವ ಮಂಟಪದ ಶ್ರೀಕಂಠ, ಸಾಹಿತಿ ಮರಡೇಶ, ರವಿ, ಲೋಕೇಶ್, ಸೂರ್ಯ ಕಾಂತ್, ಮಾಸ್ತಮ್ಮ, ಲಕ್ಷ್ಮಿ, ಪ್ರಕಾಶ್, ಶಾರದಾ ವಳಗೆರೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net