

ಚನ್ನರಾಯಪಟ್ಟಣ: ಕರ್ನಾಟಕದಿಂದ 4.5 ಲಕ್ಷ ಕೋಟಿ ರೂ. ತೆರಿಗೆ ತೆಗೆದುಕೊಳ್ಳುವ ಕೇಂದ್ರ ಸರ್ಕಾರ ತೆರಿಗೆ ಪಾಲು ಕೊಡೋದು 65 ಸಾವಿರ ಕೋಟಿ ರೂ. ಮಾತ್ರ. ಇದು ರಾಜ್ಯಕ್ಕೆ ಮಾಡುವ ಮಲತಾಯಿ ಧೋರಣೆಯಲ್ಲವೇ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಕಿಡಿಕಾರಿದರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾನುವಾರ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಯುವ ಪರ್ವ ಸಮಾವೇಶದಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ವಿಚಾರದಲ್ಲಿ ಕನ್ನಡಿಗರಿಗೆ ದ್ರೋಹ ಮಾಡಲೆಂದು ಜನರು ದೆಹಲಿಗೆ ಕಳುಹಿಸಿದ್ದಾರ ಎಂದು ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.
ದೇಶದಲ್ಲಿ ಅತ್ಯಂತ ಹೆಚ್ಚು ತೆರಿಗೆಯನ್ನು ಸಂಗ್ರಹಿಸಿಕೊಡುವ ಎರಡನೇ ರಾಜ್ಯ ಕರ್ನಾಟಕ. ಇಲ್ಲಿಂದ ಸಂಗ್ರಹವಾಗಿ ಹೋಗುವ ದುಡ್ಡು 15 ಪೈಸೆ ಕೂಡ ವಾಪಸ್ ಬರುತ್ತಿಲ್ಲ. ದೇಶದ ಒಟ್ಟು ಜಿಎಸ್‌ಟಿ ಸಂಗ್ರಹದಲ್ಲೂ ನಮ್ಮ ರಾಜ್ಯ ನೀಡುತ್ತಿರುವ ಕೊಡುಗೆ ಶೇ. 17ರಷ್ಟಿದ್ದು, ಇದರಲ್ಲಿ ಶೇ.4ರಷ್ಟು ಕೂಡ ವಾಪಸ್ ಬರುತ್ತಿಲ್ಲ. ತೆರಿಗೆ ಹಂಚಿಕೆಯಲ್ಲಿ ನಿರಂತರವಾಗಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಆಂಧ್ರಪ್ರದೇಶ, ಬಿಹಾರಕ್ಕೆ ಹಣ ಕೊಡುವ ಕೇಂದ್ರ ಸರ್ಕಾರ ಕರ್ನಾಟಕದ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದರೆ ಒಂದು ಗಂಟೆಯಲ್ಲಿ ಮೇಕೆದಾಟು ಯೋಜನೆಗೆ ಸಹಿ ಹಾಕಿಸುತ್ತೇವೆ ಎಂದು ಮಾಜಿ ಪ್ರಧಾನಿ ಹೇಳಿದ್ದರು. ಹೀಗಾಗಿ ಜನರು ಬಿಜೆಪಿ-ಜೆಡಿಎಸ್‌ಗೆ ಹೆಚ್ಚಿನ ಸೀಟ್‌ಗಳನ್ನು ಕೊಟ್ಟರು. ಆದರೆ, ಒಂದು ವರ್ಷ ಮೂರು ತಿಂಗಳು ಕಳೆದರೂ ಮೇಕೆದಾಟು ಬಗ್ಗೆ ಮಾತನಾಡುತ್ತಿಲ್ಲ. ಇದು ರಾಜ್ಯಕ್ಕೆ ಮಾಡಿದ ದ್ರೋಹವಲ್ಲವೇ? ಎಂದು ಪ್ರಶ್ನಿಸಿದ ಅವರು, ಪೆನ್ನು, ಅಧಿಕಾರ, ಸರ್ಕಾರ ಎಲ್ಲವೂ ಇದೆ. ಆದರೆ ಏಕೆ ಸಹಿ ಮಾಡಿಸಿಲ್ಲ? ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಕೊಡಬೇಕು. ಆದರೆ 53 ಪೈಸೆಯೂ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಭಾಷೆಗೆ ಅವಮಾನ: ಬಿಜೆಪಿಯವರು ಕನ್ನಡ ಭಾಷೆಯನ್ನು ನಿರ್ನಾಮ ಮಾಡುವ ಮೂಲಕ ಕನ್ನಡವನ್ನು ಪಕ್ಕಕ್ಕೆ ಸರಿಸಿ ಹಿಂದಿ ಹೇರಲು ಹೊರಟಿದ್ದಾರೆ. ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದ್ದು, ಕನ್ನಡಿಗರನ್ನೇ ಸದೆಬಡಿಯಲು ಮುಂದಾಗಿದ್ದಾರೆ. ಜೆಡಿಎಸ್ ಬಿಜೆಪಿಯ ಏಜೆಂಟ್ ಆಗಿ ಗುಲಾಮಗಿರಿ ಮಾಡುತ್ತಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ರಾಜ್ಯದ ಪರವಾಗಿ ಕಲ್ಲು-ಬಂಡೆಯಂತೆ ಗಟ್ಟಿಯಾಗಿ ಮಾತನಾಡುತ್ತಾರೆ. ನಮ್ಮ ನೀರು, ನಮ್ಮ ಪಾಲು ಕೇಳಿದ್ದಕ್ಕೆ ಸಿಬಿಐ, ಇಡಿಯಂತಹ ಸಂಸ್ಥೆಗಳನ್ನು ಛೂ ಬಿಟ್ಟು ಕೇಸ್ ಹಾಕಿಸುತ್ತಿದ್ದಾರೆ. ಆದರೂ ನಾವು ನಮ್ಮ ಪಾಲಿಗಾಗಿ ಹೋರಾಟ ಮಾಡುತ್ತೇವೆ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಯಿತು. ಜನರಿಗೆ ಕಾಂಗ್ರೆಸ್ ಮೇಲೆ ಒಲವಿದೆಯಾದರೂ ನಮ್ಮ ತಪ್ಪಿನಿಂದ ಹಿನ್ನಡೆಯಾಯಿತು. ಕಂದಾಯ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದ್ದು, ನಮ್ಮ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಯುವ ಕಾಂಗ್ರೆಸ್ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ರಾಜ್ಯ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಕೆ.ಎಲ್.ಶಿವಲಿಂಗೇಗೌಡ ಮಾತನಾಡಿ, ಬಿಜೆಪಿಯವರು ಬಿಹಾರದಲ್ಲಿ ಗ್ಯಾರಂಟಿ ಯೋಜನೆ ತರುವ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ನಮ್ಮ ಸರ್ಕಾರವನ್ನು ಅನುಸರಿಸುವ ಬದಲು ಒಳ್ಳೆಯ ಕೆಲಸ ಮಾಡಲಿ ಎಂದು ಹೇಳಿದರು.
ಕೇಂದ್ರ ಸರ್ಕಾರ ಜೆಎಸ್‌ಟಿ ಕಮಿಟಿ ರಚಿಸಿದೆಯಾದರೂ ಕರ್ನಾಟಕದಿಂದ ಕೃಷ್ಣ ಭೈರೇಗೌಡರು ರಾಜ್ಯದ ಪಾಲನ್ನು ತರುವ ಜವಾಬ್ದಾರಿಯುತ ಕೆಲಸ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯವರು ಸಿದ್ದರಾಮಯ್ಯನವರನ್ನು ವೈಭವೀಕರಿಸಲು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಟೀಕಿಸುತ್ತಾರೆ. ಮೋದಿಯವರು ವಿದೇಶಗಳಿಗೆ ಹೋಗಿ ವೈಭವೀಕರಣಕ್ಕೆ ಬರುತ್ತಾರೆಯೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನ ಜಿಲ್ಲಾ ಘಟಕವನ್ನು ಇನ್ನಷ್ಟು ಬಲಪಡಿಸುವ ಕೆಲಸ ಆಗಬೇಕಿದೆ. ಜಿಲ್ಲೆಯ ಒಬ್ಬರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಿದರೆ ರಾಜಕೀಯವಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಶಕ್ತಿ ತೋರಿಸುತ್ತೇವೆ ಎಂದು ಹೇಳುವ ಮೂಲಕ ಸಚಿವ ಸ್ಥಾನದ ಆಸೆಯನ್ನು ಬಿಚ್ಚಿಟ್ಟರು.
ಜು.26ರಂದು ಅರಸೀಕೆರೆಯಲ್ಲಿ ಭವ್ಯ ಸಮಾವೇಶ ಆಯೋಜಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಶಾಸಕ ರಿಜ್ವಾನ್ ಹರ್ಷದ್, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ, ಕರ್ನಾಟಕ ರಾಜ್ಯ ಮೂಲಸೌಕರ್ಯ ಮತ್ತು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಸಿ.ವಿ.ರಾಜಪ್ಪ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ದಿವ್ಯಾ ರಾಜೇಂದ್ರ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್, ಮದರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಜಿಲ್ಲಾ ಘಟಕದ ಯುವ ಕಾರ್ಯದರ್ಶಿ ಯುವ ಕುಮಾರ್, ಮುಖಂಡರಾದ ಎ.ಇ.ಚಂದ್ರಶೇಖರ್, ಅಣತಿ ಆನಂದ್, ಎಚ್.ಕೆ.ಮಹೇಶ್, ಪ್ರಸನ್ನ ಇತರರಿದ್ದರು.
ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ. ಸಿದ್ದರಾಮಯ್ಯನವರ ಆರ್ಥಿಕ ನೀತಿಗಳು ರಾಜ್ಯಕ್ಕೆ ಸ್ಥಿರತೆಯನ್ನು ಒದಗಿಸಿವೆ. ಬಿಜೆಪಿಯ ಟೀಕೆಗಳಿಗೆ ಜನರೇ ಉತ್ತರ ಕೊಡುತ್ತಾರೆ.
ಶ್ರೇಯಸ್.ಎಂ ಪಟೇಲ್ ಸಂಸದ