ಬಳ್ಳಾರಿ : ರಾಜ್ಯ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯಲ್ಲಿ ಸೂಕ್ಷ್ಮ ಮತ್ತು ಅಲೆಮಾರಿ ಜಾತಿಗಳ ನ್ಯಾಯಕ್ಕೆ ಆಗ್ರಹಿಸಿ, ಇಲ್ಲಿನ ಡಿಸಿ ಕಚೇರಿಯಲ್ಲಿ ಪರಿಶಿಷ್ಟ ಜಾತಿಯ 59 ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಅಲೆಮಾರಿಗಳ ಸಮುದಾಯಗಳ ಒಳ ಮೀಸಲಾತಿ ವಂಚಿತ ಹೋರಾಟ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ನ್ಯಾ. ಡಾ.ಎಚ್.ಆರ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗದ ವರದಿ ಹಿನ್ನೆಲೆ ಸರ್ಕಾರ ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಹಾಗೂ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿಕೆ ಸಮಾಜಕ್ಕೆ ಅಘಾತ ಉಂಟು ಮಾಡಿದೆ.
ಮೀಸಲಾತಿ ಜಾರಿ ಮಾಡುವ ಒತ್ತಡದಲ್ಲಿರುವ ಸರ್ಕಾರವು 101 ಪರಿಶಿಷ್ಟ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಮೀಸಲು ಪ್ರಮಾಣವನ್ನು ಎಚ್ಚರಿಕೆಯಿಂದ ನಿಗದಿಪಡಿಸಬೇಕಿತ್ತು. ಅದರಲ್ಲೂ ಅಲೆಮಾರಿಗಳಂತಹ ತಬ್ಬಲಿ ಮತ್ತು ದನಿ ಇಲ್ಲದ ಸಮುದಾಯಗಳ ವಿಷಯದಲ್ಲಿ ಸರ್ಕಾರವೂ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಆದರೆ, ಕ್ಯಾಬಿನೆಟ್ ನಿರ್ಣಯವು ಅಲೆಮಾರಿ ಸಮುದಾಯಗಳಿಗೆ ಮರಣಶಾಸಕ ಬರೆದುಬಿಟ್ಟಿದೆ. ಅಲೆಮಾರಿಗಳನ್ನು ಬಂಜಾರ, ಬೋವಿ, ಕೊರಮ, ಕೊರಚ ಸಮುದಾಯಗಳ ಜತೆಗೆ ಸೇರಿಸಿ ಶೇ. 5% ರಷ್ಟು ಮೀಸಲಾತಿಯನ್ನು ನಿಗದಿ ಮಾಡಿದ್ದರಿಂದ ಸಮುದಾಯಕ್ಕೆ ಶಾಶ್ವತವಾಗಿ ಮೀಸಲಾತಿಯಿಂದ ವಂಚಿತವಾಗಿದೆ.
ಆದ್ದರಿಂದ, ನ್ಯಾ. ಎಚ್.ಎನ್.ನಾಗಮೋಹನದಾಸ್ ಏಕ ಸದಸ್ಯ ಆಯೋಗದ ಶಿಫಾರಸ್ಸಿನಂತೆ 59 ಸೂಕ್ಷ್ಮ ಮತ್ತು ಪರಿಶಿಷ್ಟ ಜಾತಿಗಳನ್ನು ಪ್ರವರ್ಗ - ಎ ರಲ್ಲಿಯೇ ಇರಿಸಿ ಶೇ.1 ರಷ್ಟು ಒಳ ಮೀಸಲಾತಿ ನಿಗದಿಗೊಳಿಸಬೇಕು ಎಂದು ಸಂಘಟನಕಾರರು ಒತ್ತಾಯಿಸಿದರು.