ಪರಿಹಾರ ವಿತರಣೆಯಲ್ಲಿ ಅರ್ಹರಿಗೆ ಅನ್ಯಾಯ

Oplus_16908288
Oplus_16908288
Published on

 ನಂಜನಗೂಡು: ಚಿತ್ರ ನಗರಿ ನಿರ್ಮಾಣಕ್ಕೆಂದು ತಾಲೂಕಿನ ಇಮ್ಮಾವು ಗ್ರಾಮದ ಬಳಿ ಭೂಸ್ವಾಧೀನ ಮಾಡಿಕೊಳ್ಳಲಾಗಿದ್ದು, ಅರ್ಹ ರೈತರಿಗೆ ತಾಲೂಕು ಆಡಳಿತ ಪರಿಹಾರ ವಿತರಣೆ ಸಂದರ್ಭದಲ್ಲಿ ಅನ್ಯಾಯ ಮಾಡಿದೆ ಎಂದು ಆಗ್ರಹಿಸಿ ರೈತರು ಶನಿವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಇಮ್ಮಾವು, ಇಮ್ಮಾವುಹುಂಡಿ, ಅಡಕನಹಳ್ಳಿ ಹುಂಡಿ, ಆಯರಹಳ್ಳಿ, ಹುಳಿಮಾವು, ಕೋಚನಹಳ್ಳಿ ಗ್ರಾಮದ ನೂರಾರು ರೈತರು ಉದ್ದೇಶಿತ ಚಿತ್ರನಗರಿ ಸ್ಥಳಕ್ಕೆ ಟ್ಯ್ರಾಕ್ಟರ್, ಎತ್ತುಗಳೊಂದಿಗೆ ಆಗಮಿಸಿ ಉಳುಮೆ ಮಾಡಿ, ಜೋಳ ಮತ್ತು ಹುರುಳಿ ಬಿತ್ತುವ ಮೂಲಕ ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಬಳಿಕ ಜಿಲ್ಲಾಡಳಿತ, ತಾಲೂಕು ಆಡಳಿತ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗೀಯ ಸಂಘಟನೆ ಕಾರ್ಯದರ್ಶಿ ಹೊಸಕೋಟೆ ಬಸವರಾಜ್ ಮಾತನಾಡಿ, ಸುಮಾರು ಸಾವಿರ ಎಕರೆ ಜಮೀನನ್ನು ಕೆಐಎಡಿಬಿ 2008ರಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಭೂಸ್ವಾಧೀನಪಡಿಸಿಕೊಂಡಿದೆ. ಇದರಲ್ಲಿ ಸುಮಾರು 500 ಎಕರೆ ಸರ್ಕಾರಿ ಗೋಮಾಳವಿದೆ. ಅಲ್ಲದೆ ಸುಮಾರು 480ಕ್ಕೂ ಹೆಚ್ಚು ರೈತರು ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದೇವೆ ಎಂದು ಅರ್ಜಿ ಸಲ್ಲಿಸಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ರೈತರಿಗೆ ಅನುಮೋದನೆ ನೀಡಿಲ್ಲ ಎಂದು ಕಿಡಿಕಾರಿದರು.

ಪಹಣಿ ಇರವ ರೈತರಿಗೆ 21 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರ ಆದೇಶ ಮಾಡಿದ್ದು, ಸಾಗುವಳಿ ಮಾಡುತ್ತಿದ್ದ ರೈತರಿಗೆ ಪರಿಹಾರ ಕೊಡದ ಹಿನ್ನೆಲೆಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಅವರ ಟಿಪ್ಪಣಿ ಆಧಾರದ ಮೇಲೆ 480 ಅರ್ಜಿದಾರರಿಗೆ ಪರಿಹಾರ ಕೊಡುವಂತೆ ಸೂಚಿಸಲಾಗಿದ್ದು, 18 ಕೋಟಿ ರೂ. ಬಿಡುಗಡೆಗೊಂಡು ಮಾನವೀಯತೆ ಆಧಾರದ ಮೇಲೆ 4 ಲಕ್ಷ ರೂ. ಪರಿಹಾರ ನೀಡಲು ಆದೇಶವಾಗಿದೆ. ಆದರೆ ಕೆಲವು ರಾಜಕೀಯ ಮುಖಂಡರು ಬೆಂಗಳೂರಿನಲ್ಲಿ ಕುಳಿತು ಮೂಲ ರೈತರನ್ನು ಕೈ ಬಿಟ್ಟುಬೇರೆ ಬೇರೆ ಭಾಗದ ಜನರಿಗೆ ಪರಿಹಾರ ಕೊಡಿಸಿದ್ದಾರೆ. ಅರ್ಹ ರೈತರು ಪರಿಹಾರ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದಾಗ ವಿಷಯ ತಿಳಿದು 146 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಪುಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಂಕಯ್ಯ, ಶ್ರೀಕಂಠ ಬಸಪ್ಪ ಪ್ರಕಾಶ್, ಪ್ರೇಮ್‌ರಾಜ್, ಚಂದ್ರಶೇಖರ್, ಚಂದ್ರೇಗೌಡ, ಕುಮಾರ್, ಮಹೇಶ್, ಶಿವಣ್ಣನಾಯಕ, ರಾಜಮ್ಮ, ಪುಟ್ಟಮ್ಮ, ಸಾಕಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net