

ಚಿಕ್ಕಮಗಳೂರು: ೨೦೧೬ ಕ್ಕಿಂತ ಮೊದಲು ೧ ರಿಂದ ೭ ಮತ್ತು ೧ ರಿಂದ ೮ ವೃಂದಕ್ಕೆ ನೇಮಕಾತಿಯಾದ ಎಲ್ಲ ಶಿಕ್ಷಕರನ್ನು ಪ್ರಾಥಮಿಕ ಶಾಲಾ ಶಿಕ್ಷಕರು, ೧ ರಿಂದ ೫ ಎಂದು ಪರಿಗಣಿಸಿ ಸರ್ಕಾರ ಆದೇಶಿಸಿದ್ದರಿಂದ ಸುಮಾರು ೧.೨೦ ಲಕ್ಷ ಶಿಕ್ಷಕರಿಗೆ ಅನ್ಯಾಯವಾಗಿದೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಆ. ೧೨ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಶಿಕ್ಷಕರಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಭೈರೇಗೌಡ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಪ್ರತಿಭಟನೆ ಪೂರ್ವಭಾವಿಯಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ, ಜಿಪಂ ಸಿಇಒ, ಡಿಡಿಪಿಐ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಶಾಖೆ ನಿರ್ಧರಿಸಿದೆ ಎಂದರು.
೧ ರಿಂದ ೮ನೇ ತರಗತಿಗೆ ನೇಮಕವಾದ ಶಿಕ್ಷಕರನ್ನು ಪಿಎಸ್‌ಟಿ ಎಂದು ಪದನಾಮ ಮಾಡಿ ೧-೫ ಕ್ಕೆ ಸೀಮಿತಗೊಳಿಸಿರುವ ಆದೇಶ ಹಿಂಪಡೆಯಬೇಕು. ಅರ್ಹ ವಿದ್ಯಾರ್ಹತೆ ಪೂರೈಸಿರುವ ೨೦೧೬ ಕ್ಕಿಂತ ಮುಂಚೆ ನೇಮಕವಾದ ಎಲ್ಲ ಶಿಕ್ಷಕರಿಗೆ ಮೊದಲಿನ ಅರ್ಹತೆಯ ಆಧಾರದಲ್ಲಿ ಪ್ರೌಢಶಾಲೆಗೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಒಂದು ಕಾರ್ಯಕಾರಿ ಆದೇಶವನ್ನು ಹೊರಡಿಸಬೇಕು. ಉಲ್ಲಂಘನೆಯಾಗಿರುವ ನಿಯಮಗಳನ್ನು ಸರಿಪಡಿಸುವ ಜತೆಗೆ ನಿರಂತರ ಸೇವಾನುಭವ ಮತ್ತು ಉನ್ನತ ವಿದ್ಯಾರ್ಹತೆ ಹೊಂದಿರುವ ಸೇವಾನಿರತ ಶಿಕ್ಷಕರಿಗೆ ಯಾವುದೇ ರೀತಿಯ ತಾರತಮ್ಯ ಹಾಗೂ ಅನ್ಯಾಯವಾಗದಂತೆ ನಿಯಮ ರೂಪಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಪರಮೇಶ್ವರಪ್ಪ, ತಾಲೂಕು ಅಧ್ಯಕ್ಷ ಕಿರಣ್ ಕುಮಾರ್, ಪದಾಧಿಕಾರಿಗಳಾದ ಜಗದೀಶ್, ಶ್ರೀನಿವಾಸ್, ವಿಲ್ಮ, ಗೀತಾ, ಚೈತ್ರಾ ಮತ್ತಿತರರಿದ್ದರು.