ಕಾನೂನು ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ

25 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯದಲ್ಲಿ ಹಿರಿಯ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ಕಾನೂನು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ಮಂಜುನಾಥ ಹೊಂಗಲದ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ವರ್ಷದ ಎರಡು ಸೆಮಿಸ್ಟರ್​ನಲ್ಲಿ ಕನಿಷ್ಠ 7 ವಿಷಯಗಳನ್ನು ಪಾಸಾದರೆ 3ನೇ ಸೆಮಿಸ್ಟರ್​ ಅಥವಾ 2ನೇ ವರ್ಷಕ್ಕೆ ಪ್ರವೇಶವಿದೆ. ಕಾನೂನು ವಿವಿ ವಿದ್ಯಾರ್ಥಿ ಶ್ರೇಯಸ್​ ಎಂಬುವರು ಮೊದಲ ಅವಕಾಶದಲ್ಲಿ 7 ವಿಷಯಗಳನ್ನು ಪಾಸಾಗಿರಲಿಲ್ಲ. ಮರು ಪರೀಕ್ಷೆಯಲ್ಲಿ ಪಾಸಾಗಿದ್ದರು. ಮರು ಪರೀಕ್ಷೆ ಫಲಿತಾಂಶ ಬರುವ ಪೂರ್ವದಲ್ಲೇ 3ನೇ ಸೆಮಿಸ್ಟರ್​ ಪರೀಕ್ಷೆಗಳಿಗೆ ಅರ್ಜಿ ತುಂಬುವ ಪ್ರಕ್ರಿಯೆ ಪೂರ್ಣವಾಗಿತ್ತು. ಇದರಿಂದ ಶ್ರೇಯಸ್​ಗೆ ಅನ್ಯಾಯವಾಗಿದೆ ಎಂದರು.

ಇದನ್ನು ಪ್ರಶ್ನಿಸಿ ಶ್ರೇಯಸ್​ ನ್ಯಾಯಾಲಯದ ಮೊರೆ ಹೋಗಿ ಆದೇಶದ ಮೂಲಕ ಪರೀಕ್ಷೆಗೆ ಅವಕಾಶ ಪಡೆದಿದ್ದು, ಇದೀಗ ಪರೀಕ್ಷೆಗೆ ಕೂರಲು ವಿವಿ ನಿರ್ದೇಶಕರಾದ ರತ್ನಾ ಭರಭಮಗೌಡರ ಹಾಗೂ ಮೌಲ್ಯಮಾಪನ ಕುಲಸಚಿವೆ ಗೀತಾ ಕೌಲಗಿ ಅವಕಾಶ ನೀಡುತ್ತಿಲ್ಲ. ಹೀಗಾಗಿ ಶ್ರೇಯಸ್​ ಮತ್ತೆ ನ್ಯಾಯಾಲಯದ ಮೊರೆ ಹೋಗಿ ಪರೀಕ್ಷೆಗೆ ಅವಕಾಶಕ್ಕೆ ಆದೇಶ ತಂದಿದ್ದಾನೆ. ಆದರೆ, ಪರೀಕ್ಷೆಗೆ ಕೂರಲು ಅವಕಾಶ ನೀಡದೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ ಎಂದು ದೂರಿದರು.

ವಿವಿಯ ವಿದ್ಯಾರ್ಥಿಗಳಿಗೆ ಈ ಅಧಿಕಾರಿಗಳು ಸರಿಯಾದ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ. ಇದರ ಜತೆಗೆ ವಿವಿಯಲ್ಲಿ ಸರಿಯಾದ ಭದ್ರತಾ ವ್ಯವಸ್ಥೆಯೂ ಇಲ್ಲವಾಗಿದೆ. ಕೂಡಲೇ ಕುಲಪತಿ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

ದಾನೇಶ ನಂದನವರ, ನಾರಾಯಣ ಎಸ್​., ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net