ಎಸ್‌ಸಿ ಎಸ್‌ಟಿ ಒಬಿಸಿಗೆ ಅನ್ಯಾಯ; ಕಾಂಗ್ರೆಸ್ ವಿರುದ್ಧ ವಿವೇಕಾನಂದ ಡಬ್ಬಿ ವಾಗ್ದಾಳಿ

VIVEKANANDA DABBI PRESS MEET
ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಸುದ್ದಿಗೋಷ್ಠಿ ನಡೆಸಿದರು. ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ರವಿ ವಗ್ಗೆ, ಮುಖಂಡರಾದ ಅನೀಲ ಜಮಾದಾರ, ಭರತ ಕೋಳಿ, ವಿಜಯ ಜೋಷಿ ಇದ್ದಾರೆ.
Published on

ವಿಜಯಪುರ: ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅದೇ ಸಮುದಾಯಗಳಿಗೆ ತೀವ್ರ ಅನ್ಯಾಯ ಮಾಡಿದೆಯಲ್ಲದೇ, ಇದೊಂದು ಅಹಿಂದ ವಿರೋಧಿ ಪಕ್ಷ ಎಂಬುದಕ್ಕೆ ಹಿಂದುಳಿದ ವರ್ಗದ ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದನ್ನೂ ಸಹಿಸದೇ ಅವರ ತಾಯಿಯನ್ನು ನಿಂದಿಸಿರುವುದೇ ಸಾಕ್ಷಿ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಹರಿಹಾಯ್ದರು.

ಬಿಹಾರದಲ್ಲಿ ಕಾಂಗ್ರೆಸ್ ನೇತೃತ್ವದ ಒಕ್ಕೂಟ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯನ್ನು ನಿಂದಿಸಿದೆ. ಹಿಂದುಳಿದ ವರ್ಗಕ್ಕೆ ಸೇರಿರುವ ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವುದನ್ನು ಸಹಿಸದ ಕಾಂಗ್ರೆಸ್ ಪದೇ ಪದೇ ಮೋದಿ ಮತ್ತು ಅವರ ಕುಟುಂಬವನ್ನು ಟೀಕಿಸುತ್ತಲೇ ಬಂದಿದೆ. ಇನ್ಮುಂದೆ ಇಂಥದ್ದನ್ನೆಲ್ಲ ಸಹಿಸಲಾಗಲ್ಲ. ಕಾಂಗ್ರೆಸ್ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಎಚ್ಚರಿಸಿದರು.

ಕಳೆದ ಹನ್ನೆರಡು ವರ್ಷಗಳ ಕಾಲ ಕೇಂದ್ರದಲ್ಲಿರುವ ನೆರೇಂದ್ರ ಮೋದಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತಾ ಬಂದಿದ್ದು, ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಬಿಜೆಪಿ ಅಭಿವೃದ್ಧಿ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತದೆ. ಆದರೆ, ಕಾಂಗ್ರೆಸ್ ಜಾತಿಯಾಧಾರದ ಮೇಲೆ ಧರ್ಮವನ್ನು ಮತ್ತು ದೇಶವನ್ನು ವಿಭಜಿಸುತ್ತಲೇ ಇದೆ. ಮೈಸೂರಿನ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಒಂದು ಸಮುದಾಯಕ್ಕೆ ಉಚಿತವಾಗಿ ಪ್ರವೇಶಾವಕಾಶ ಕಲ್ಪಿಸಿದೆ. ಇನ್ನುಳಿದ ಎಸ್‌ಸಿ-ಎಸ್‌ಟಿ, ಒಬಿಸಿ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಕಾಂಗ್ರೆಸ್‌ನಲ್ಲಿರುವ ಎಸ್‌ಸಿ-ಎಸ್‌ಟಿ ಹಾಗೂ ಒಬಿಸಿ ನಾಯಕರುಗಳು ಮೌನ ವಹಿಸುತ್ತಿರುವುದು ಆ ಸಮುದಾಯಗಳಿಗೆ ದ್ರೋಹ ಬಗೆದಂತಾಗಿದೆ ಎಂದರಲ್ಲದೇ, ಎಸ್‌ಸಿ-ಎಸ್‌ಟಿ ಮತ್ತು ಒಬಿಸಿ ಸಮುದಾಯಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸುವುದು ಈ ಸರ್ಕಾರಕ್ಕೆ ಬೇಕಿಲ್ಲವೇ ಎಂದು ಪ್ರಶ್ನಿಸಿದರು.

ಎಸ್‌ಸಿ-ಎಸ್‌ಟಿ ಮತ್ತು ಹಿಂದುಳಿದ ವರ್ಗದವರ ಜನಸಂಖ್ಯೆ ಹೆಚ್ಚಾಗಿದೆ. ಅವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುವಂತಾಗಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ರಾಜಕೀಯ ಮಾಡುವುದು ಕಷ್ಟವಾಗಲಿದೆ ಎಂದು ಕಾಂಗ್ರೆಸ್ ನಾಯಕರನ್ನು ಎಚ್ಚರಿಸಿದ ವಿವೇಕಾನಂದ ಅವರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಮೋದಿ ಸರ್ಕಾರ ಜಾರಿಗೆ ತಂದ ವಿಶ್ವ ಕರ್ಮ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಸಮರ್ಪಕವಾಗಿ ಅನುಷ್ಟಾನಗೊಳಿಸಿಲ್ಲ. ಕೂಡಲೇ ಆಯಾ ಸಮುದಾಯಗಳಿಗೆ ಸಿಗಬೇಕಾದ ಸೌಲಭ್ಯಗಳು ಸಿಗಬೇಕು. ಇಲ್ಲವಾದಲ್ಲಿ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದರು.

ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜ್ ಮಂಜೂರಾದರೂ ಈವರೆಗೆ ಅನುಷ್ಟಾನಗೊಳಿಸಿಲ್ಲ. ಸುಮಾರು 120 ಕಾಲೇಜು ಹೊಂದಿರುವ ವಿಜಯಪುರ ಜಿಲ್ಲೆಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಸ್ಥಾಪಿಸಬೇಕೆಂಬ ಬೇಡಿಕೆ ಇದ್ದರೂ ಈವರೆಗೂ ಈಡೇರಿಲ್ಲ. ಜಿಲ್ಲೆಯ ಕಾಂಗ್ರೆಸ್ ನಾಯಕರು ಪ್ರತ್ಯೇಕ ವಿಶ್ವ ವಿದ್ಯಾಲಯಕ್ಕಾಗಿ ಶ್ರಮಿಸಬೇಕು. ನೆರೆಯ ಬಾಗಲಕೋಟೆ ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಕಾಲೇಜುಗಳಿದ್ದರೂ ಪ್ರತ್ಯೇಕ ವಿಶ್ವ ವಿದ್ಯಾಲಯ ನೀಡಲಾಗಿದೆ. ಜಿಲ್ಲೆಯ ನಾಯಕರಿಗೇನಾಗಿದೆ? ಎಂದರು.

ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ರವಿ ವಗ್ಗೆ, ಮುಖಂಡರಾದ ಅನೀಲ ಜಮಾದಾರ, ಭರತ ಕೋಳಿ, ವಿಜಯ ಜೋಷಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net