ಮುಡಗೇರಿ ರೈತರಿಗೆ ಅನ್ಯಾಯ-ಎಕರೆಗೆ 31.65 ಲಕ್ಷ ರೂ. ನಷ್ಟ

Satish Sail.
Published on

ಕಾರವಾರ: ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ಮುಡಗೇರಿ ಗ್ರಾಮದ ಭೂ ಮಾಲೀಕರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ಲೆಕ್ಕ ಹಾಕುವಲ್ಲಿ ವ್ಯತ್ಯಾಸವಾಗಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಶಾಸಕ ಸತೀಶ ಸೈಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 2013 ರ ಭೂಸ್ವಾಧೀನ ಕಾಯ್ದೆಯಂತೆ ಲೆಕ್ಕ ಹಾಕಿದಲ್ಲಿ ರೈತರಿಗೆ ಪ್ರತಿ ಎಕರೆಗೆ 77 ಲಕ್ಷ ರೂ. ಪರಿಹಾರ ಸಿಗಬೇಕಿತ್ತು.ಈಗ 50 ಲಕ್ಷ ರೂ. ನೀಡಿ ರೈತರಿಂದ ನೇರ ಖರೀದಿಯ ಒಪ್ಪಿಗೆ ಪತ್ರ ಪಡೆಯಲಾಗುತ್ತಿದೆ. ಪ್ರತಿ ಎಕರೆಗೆ ಸುಮಾರು 31.65 ಲಕ್ಷ ರೂ. ನಷ್ಟವಾಗುತ್ತಿದೆ. ಹಿಂದಿನ ಶಾಸಕಿ ಅವರಿಂದಲೇ ಪರಿಹಾರ ಬಂತು ಎಂದು ಅವರಿಗೆ ಸನ್ಮಾನ ಮಾಡಿದವರು ಈಗ ಆಗುತ್ತಿರುವ ಅನ್ಯಾಯಕ್ಕೆ ಉತ್ತರ ನೀಡಬೇಕು ಎಂದರು.
ಪರಿಹಾರ ಲೆಕ್ಕ ಹಾಕುವಲ್ಲಿ ತಪ್ಪಿ, ರೈತರಿಗೆ ಮೋಸ ಮಾಡಿದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಕೈಗಾರಿಕಾ ಸಚಿವರು, ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಇದುವರೆಗೆ ಪರಿಹಾರ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ, ಯಾರಿಗೂ ಪರಿಹಾರ ವಿತರಣೆಯಾಗದ ಕಾರಣ ಜಿಲ್ಲಾಧಿಕಾರಿ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಹೋಗಿ ಹೋರಾಟ ಮಾಡುವ ಅವಕಾಶವಿದೆ. ನನ್ನ ಗಮನಕ್ಕೆ ಈಗ ಬಂದ ವಿಚಾರವನ್ನು ರೈತರ ಮುಂದಿಡುತ್ತಿದ್ದೇನೆ. ರೈತರು ಬಯಸಿದರೆ, ಕಾನೂನು ಹೋರಾಟಕ್ಕೆ, ಹೆಚ್ಚಿನ ಪರಿಹಾರ ಕೊಡಿಸಲು ಬದ್ಧ ಎಂದರು.
ಹೇಗೆ ಅನ್ಯಾಯ..?
1997 ರಲ್ಲಿ ಮುಡಗೇರಿಯ 73 ಎಕರೆಯನ್ನು ವಶಪಡಿಸಿಕೊಳ್ಳಲು ಕೆಐಎಡಿಬಿ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಆದರೆ, ಮಾಲೀಕರಿಗೆ ಪರಿಹಾರ ನೀಡಿರಲಿಲ್ಲ. ಈಗ 2022 ರ ಡಿಸೆಂಬರ್‌ನಲ್ಲಿ ಆದ ಸಭೆಯಲ್ಲಿ ಪ್ರಸ್ತುತ ಮಾರುಕಟ್ಟೆ ಬೆಲೆಯಂತೆ ಪ್ರತಿ ಎಕರೆಗೆ 11.33 ಲಕ್ಷ ರೂ. ಬೆಲೆ ನಿಗದಿ ಮಾಡಲಾಗಿದೆ. ನಗರದಿಂದ 5 ಕಿಮೀ ವ್ಯಾಪ್ತಿಯ ಹೊರಗಿರುವ ಕಾರಣ ಮೂಲ ಪರಿಹಾರ ಧನದ ದುಪ್ಪಟ್ಟು ಎಂದರೆ 22.67 ಲಕ್ಷ ರೂ. ಅದಕ್ಕೆ ಶೇ.100 ರಷ್ಟು ಸೊಲೇಶಿಯಂ(ನಷ್ಟ ಭರ್ತಿ)ಸೇರಿಸಿ ಪ್ರತಿ ಎಕರೆಗೆ ಒಟ್ಟಾರೆ 45.34 ಲಕ್ಷ ರೂ.ಪರಿಹಾರವಾಗಲಿದೆ. ಜಿಲ್ಲಾಧಿಕಾರಿ ತಮ್ಮ ಅಧಿಕಾರ ಬಳಸಿ 4.65 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ನಿಗದಿಪಡಿಸಿದ್ದಾರೆ. ಒಟ್ಟಾರೆ ಪ್ರತಿ ಎಕರೆಗೆ 50 ಲಕ್ಷ ರೂ. ನೀಡಲಾಗುತ್ತಿದೆ.

ಇದನ್ನೂ ಓದಿ: ಕಾಳಿ ನದಿಯಲ್ಲಿ ಜಲ ಸಾಹಸ ಕ್ರೀಡಾ ತರಬೇತಿ ಪ್ರಾರಂಭ
ಆದರೆ, ಅದೇ ಕಾಯ್ದೆಯಂತೆ ಭೂ ಸ್ವಾಧೀನ ಅಧಿಸೂಚನೆಯಾದ ದಿನದಿಂದ ಭೂಮಿ ಸ್ವಾಧೀನಪಡಿಸಿಕೊಂಡ ದಿನದವರೆಗೆ ಶೇ.12 ರಷ್ಟು ಬಡ್ಡಿ ನೀಡಬೇಕು. ಆ ಬಡ್ಡಿಯನ್ನು ಮುಡಗೇರಿ ಪರಿಹಾರ ಪ್ರಕ್ರಿಯೆಯಲ್ಲಿ ಪರಿಗಣಿಸಿ, ಲೆಕ್ಕ ಹಾಕಿಲ್ಲ. 1997 ರಲ್ಲಿ ಅಧಿಸೂಚನೆ ಹೊರಡಿಸಿದ್ದರೂ 2020 ರಲ್ಲಿ ಜಮೀನನ್ನು ಸ್ವಾಧೀನಕ್ಕೆ ಪಡೆಯಲಾಗಿದೆ. ಎಂದರೆ 8587 ದಿನಗಳಿಗೆ ಬಡ್ಡಿ ನೀಡಬೇಕಾಗಿದೆ. ಜಿಲ್ಲಾಧಿಕಾರಿ ಹೊರಡಿಸಿದ ಆದೇಶದಲ್ಲಿ ಅದನ್ನು ನಮೂದಿಸಿದ್ದರೂ ಒಟ್ಟಾರೆ ಪರಿಹಾರದಲ್ಲಿ ಅದನ್ನು ಸೇರಿಸಿಯೇ ಇಲ್ಲ. ನಿಜವಾಗಿ ರೈತರಿಗೆ ಕಾಯ್ದೆಯಂತೆಯೇ ಪ್ರತಿ ಎಕರೆಗೆ 77 ಲಕ್ಷ ರೂ.ಪರಿಹಾರ ಸಿಗಬೇಕಿತ್ತು. 31.65 ಲಕ್ಷ ರೂ. ನಷ್ಟವಾಗುತ್ತಿದೆ ಎಂದರು. ಕಾಂಗ್ರೆಸ್ ಮುಖಂಡರಾದ ಕೆ.ಶಂಭು ಶೆಟ್ಟಿ, ಸಮೀರ ನಾಯ್ಕ, ವಿಜಯ ದೇಸಾಯಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net