

ಮೈಸೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿ ಹಂಚಿಕೆಯಲ್ಲಿ ಮಾದಿಗ ಸಮುದಾಯಕ್ಕೆ ತೀವ್ರ ಅನ್ಯಾಯವಾಗಿದ್ದು, ಈ ಮೀಸಲಾತಿ ಹಂಚಿಕೆಯು ಮಾದಿಗ ಸಮುದಾಯದ ಪಾಲಿಗೆ ಮರಣ ಶಾಸನವಾಗಿದೆ ಎಂದು ಕರ್ನಾಟಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಎಸ್. ಅರುಣ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಮೀಸಲಾತಿ ಹಂಚಿಕೆ ಅವೈಜ್ಞಾನಿಕವಾಗಿದ್ದು, ಸಾಮಾಜಿಕ ನ್ಯಾಯ ಪಾಲನೆ ಮಾಡಲು ಸರ್ಕಾರ ಆಸಕ್ತಿ ತೋರಿಲ್ಲ. ಪೆರಿಯಾ, ಪೆರಿಯನ್ ಮತ್ತು ಮೊಗೆರಾ ಸಮುದಾಯಗಳನ್ನು ಒಳ ಮೀಸಲಾತಿ ಹಂಚಿಕೆಯಲ್ಲಿ ಪ್ರವರ್ಗ-ಬಿ(ಹೊಲೆಯ ಹಾಗೂ ಇನ್ನಿತರೆ ಬಲಗೈ ಸಮುದಾಯಗಳು)ಗೆ ಸೇರಿಸಿರುವುದು ವ್ಯವಸ್ಥಿತ ಪಿತೂರಿಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಸಮೀಕ್ಷೆ ಸಂದರ್ಭ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಸಮುದಾಯದವರು ಜಾತಿ ನಮೂದಿಸಿಲ್ಲ. ಮೂಲ ಜಾತಿ ಹೇಳಿಕೊಳ್ಳದೆ ಇರುವ ಈ ಸಮುದಾಯದವರು 4.74 ಲಕ್ಷದಷ್ಟು ಇದ್ದು, ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗವು ಇವರನ್ನು ಒಂದು ಗುಂಪು ಮಾಡಿ ಶೇ.1 ರಷ್ಟು ಒಳ ಮೀಸಲಾತಿ ಹಂಚಿಕೆ ಮಾಡಿತ್ತು. ಆದರೆ, ಅಲ್ಲಿಯೂ ಪಿತೂರಿ ನಡೆಸಿ ಈ ಸಮುದಾ ಯದ ಅರ್ಧದಷ್ಟು ಜನರನ್ನು ಪ್ರವರ್ಗ-ಎ(ಮಾದಿಗ ಮತ್ತು ಇನ್ನಿತರೆ ಎಡಗೈ ಸಮುದಾಯಗಳು) ಮತ್ತು ಇನ್ನರ್ಧದಷ್ಟು ಪ್ರವರ್ಗ-ಬಿ ಗೆ ಸೇರ್ಪಡೆಗೊಳಿಸಿ ತಲಾ ಶೇ.6 ರಷ್ಟು ಒಳ ಮೀಸಲಾತಿ ಹಂಚಿಕೆ ಮಾಡಿರುವುದು ಅವೈಜ್ಞಾನಿಕ ಎಂದರು.
ಅಷ್ಟು ಮಾತ್ರವಲ್ಲದೆ ಹೊಲೆಯ ಗುಂಪಿನಲ್ಲಿರುವ(ಪ್ರವರ್ಗ-ಬಿ) ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರದ ವ್ಯಕ್ತಿ, ಸರ್ಕಾರದ ಸವಲತ್ತುಗಳನ್ನು ಮಾದಿಗರ ಗುಂಪಿನಲ್ಲಿ(ಪ್ರವರ್ಗ-ಎ)ಯೂ ಪಡೆದುಕೊಳ್ಳಬಹುದು ಎಂದು ಆದೇಶಿಸುವ ಮೂಲಕ ರಾಜ್ಯ ಸರ್ಕಾರ ಮಾದಿಗ ಸಮುದಾಯಕ್ಕೆ ದ್ರೋಹವೆಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾದಿಗರ ಕ್ರಾಂತಿಕಾರಿ ಒಳಮೀಸಲಾತಿ ಹೋರಾಟ ಸಮಿತಿಯ ಬಿ.ಆರ್.ಭಾಸ್ಕರ್ ಪ್ರಸಾದ್ ಮಾತನಾಡಿ, ಒಳ ಮೀಸಲಾತಿ ಹಂಚಿಕೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ತಿ.ನರಸೀಪುರದಲ್ಲಿರುವ ಎನ್.ರಾಚಯ್ಯ ಅವರ ಸಮಾಧಿ ಸ್ಥಳದಿಂದ ಅ.12 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಪ್ರಾರಂಭಿಸಲಾಗುವುದು. ನಂತರ ಅಲ್ಲಿಂದ ಮುಖ್ಯಂಮತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರ ಮನೆಗೆ ತೆರಳಿ ನ್ಯಾಯಕ್ಕಾಗಿ ಹೋರಾಟ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮಾದಿಗರ ಸಂಘದ ಪದಾಧಿಕಾರಿಗಳಾದ ಪಿ.ನಾರಾಯಣ, ಇಂದ್ರಮ್ಮ ಇದ್ದರು.