

ಮುಧೋಳ: ಸಮಾಜದಲ್ಲಿ ಶ್ರೇಣಿಕೃತ ವ್ಯವಸ್ಥೆ ಇಂದಿಗೂ ಮುಂದುವರಿದಿದೆ. ಇಷ್ಟೆಲ್ಲ ಇದ್ದಾಗಲೂ ನನ್ನ ಧರ್ಮ ಎಂದು ಬೊಗಳೆ ಬಿಡುವ ಕೆಲ ನಾಯಕರು ಕೆಳ ಸಮುದಾಯದ ಜನರನ್ನು ಮೇಲೆತ್ತುವ ಕೆಲಸ ಮಾಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಬೇಸರ ವ್ಯಕ್ತಪಡಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಭವನದಲ್ಲಿ ಜಿಲ್ಲಾ ಅಂಬಿಗರ ಸಮಾಜದ ನೌಕರರ ಸಂಘ, ಜಿಲ್ಲಾ ಅಂಬಿಗರ ಸಮಾಜದ ಸೇವಾ ಸಂಘ, ತಾಲೂಕು ಅಂಬಿಗರ ಸಮಾಜದ ನೌಕರರ ಸಂಘ, ತಾಲೂಕು ನಿಜಶರಣ ಅಂಬಿಗರ ಚೌಡಯ್ಯನವರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸೈನಿಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಾಭಿಮಾನದ ಕಿಚ್ಚು ಮೂಡದ ಹೊರತು ನಾವು ಶೋಷಣೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಶಿಕ್ಷಣವೆಂಬ ಅಸ್ತ್ರವನ್ನು ಪಡೆದು ಪ್ರತಿಯೊಂದನ್ನು ಪ್ರಶ್ನಿಸಿ ಸಮಾಜದ ಮುನ್ನೆಲೆಗೆ ಬರಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಅಂಬೇಡ್ಕರ್ ಅವರು ಹೇಳಿದಂತೆ ರಾಜಕಾರಣದಲ್ಲಿ ಅಭಿವೃದ್ಧಿ ಅಡಗಿದೆ. ಅವರ ಮಾತಿನಂತೆ ನಾವು ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಮ್ಮ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಬಲಿಷ್ಠ ಅಸ್ತ್ರವಾಗಿರುವ ಮತದಾನದ ಶಕ್ತಿಯಿಂದ ಸಮಾಜದ ಶ್ರೇಯೋಭಿವೃದ್ಧಿ ಸಾಧ್ಯ. ಸಣ್ಣತನದ ಮುನಿಸು ಹಾಗೂ ಮನೋಭಾವದಿಂದ ಸಮಾಜದಲ್ಲಿ ಸಂಘಟನೆ ಮಾಡಲು ಸಾಧ್ಯವಾಗುವುದಿಲ್ಲ. ಪ್ರಜ್ಞಾವಂತರಾಗಿ ರಾಜಕಾರಣದಿಂದ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಎಸ್‌ಟಿ ಪ್ರಮಾಣಪತ್ರ ಪಡೆಯಲು ಸೂಕ್ತ ರೂಪುರೇಷೆ ತಯಾರಿಸಬೇಕು. ಸರಿಯಾದ ನಿಟ್ಟಿನಲ್ಲಿ ಹೋರಾಟ ರೂಪಿಸಿ ಎಲ್ಲ ಪಕ್ಷಗಳ ಮೇಲೆ ಒತ್ತಡ ಹಾಕಬೇಕು ಎಂದರು.
ಹಾವೇರಿ ಜಿಲ್ಲೆ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಪೀಠಾಧಿಕಾರಿ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ಮಾತನಾಡಿ, ಸಮ ಸಮಾಜಕ್ಕಾಗಿ ಹನ್ನೆರಡನೆಯ ಶತಮಾನದಲ್ಲಿ ವಚನಕಾರರು ಮಾಡಿದ ಕ್ರಾಂತಿ ಇಂದಿಗೂ ಮುಂದುವರಿದರೂ ಅಸ್ಪಶ್ಯತೆ ನಿಂತಿಲ್ಲ ಎಂದರು.
ಅಂಬಿಗರ ಸಮಾಜ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ, ರಾಜಕೀಯ, ಧಾರ್ಮಿಕ ಹಾಗೂ ಸಮಾನತೆಯ ಕ್ರಾಂತಿಯಾಗಬೇಕು. ಎಲ್ಲರ ನಂಬಿಗಸ್ಥ ಜನಾಂಗವಾದ ಅಂಬಿಗರ ಸಮಾಜಕ್ಕೆ ಸಾಕಷ್ಟು ಅನ್ಯಾಯವಾಗಿದ್ದು, ಎಲ್ಲ ಸಮಾಜದ ಮುಖಂಡರು ಸಂಘಟಕರಾಗಿ ಶಿಕ್ಷಣವಂತರಾಗಿ ಹೋರಾಟ ಮಾಡಿ ಸಮುದಾಯಕ್ಕೆ ಹೊಸ ಭರವಸೆ ಮೂಡುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆಪಿಸಿಸಿ ಹಿಂದುಳಿದ ಘಟಕದ ಅಧ್ಯಕ್ಷ ಮುದಕಣ್ಣ ಅಂಬಿಗೇರ, ಮುಧೋಳ ಕ್ಷೇತ್ರದಲ್ಲಿ 26 ಸಾವಿರ ಸಮಾಜದ ಮತದಾರರಿದ್ದಾರೆ. ನಮ್ಮ ಸಮಾಜ ಬಾಂಧವರಿಗೆ ಅರ್ಹ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದರು.
ಅಂಬಿಗರ ಸಮಾಜದ ತಾಲೂಕು ಅಧ್ಯಕ್ಷ ಸದಾಶಿವ ಹೊಸಮನಿ, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ನಾಗಪ್ಪ ಅಂಬಿ, ಮುದಕಣ್ಣ ಅಂಬಿಗೇರ, ದಿಲೀಪ ಕುರಂದೆವಾಡೆ, ಭೀಮಸಿ ತಳವಾರ, ಚಿನ್ನು ಅಂಬಿ, ಮಹಾಲಿಂಗಪ್ಪ ಅಂಬಿಗೇರ, ರಾಚಣ್ಣ ಪೂಜಾರಿ,ಮುದಕಣ್ಣ ಅಂಬಿಗೇರ, ಬಸವರಾಜ ಕೋಳಿ, ರಮೇಶ ಸುಣಗಾರ, ಅಶೋಕ ವಾಲೀಕಾರ, ಸುರೇಶ ತಳವಾರ, ಹನುಮಂತ ಸಿಂಧೂರ, ಸಿ.ಆರ್. ಕೋಲಕಾರ, ರಾಮಣ್ಣ ವಾಲೀಕಾರ, ಉದಯ ಅಂಬಿಗೇರ, ತಾಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಅಂಬಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಮುಲ್ಲಾ ಇದ್ದರು.
ಮಾಜಿ ಸೈನಿಕರು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಸಮಾಜದ ನೌಕರರನ್ನು ಸನ್ಮಾನಿಸಲಾಯಿತು.