ಬಿಜೆಪಿಯಿಂದ ಅಡಕೆ ಬೆಳೆಗಾರರಿಗೆ ಅನ್ಯಾಯ

nrp anushu
Published on

ಎನ್.ಆರ್.ಪುರ: ಹತ್ತು ವಷರ್ ಸಂಸದರಾಗಿ, ಕೇಂದ್ರ ಕೃಷಿ ಕಲ್ಯಾಣ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಮರೆತುಬಿಟ್ಟಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಆರೋಪಿಸಿದರು.

2014 ಹಾಗೂ 2019ರಲ್ಲಿ ಬಿಜೆಪಿ ನೀಡಿದ ಭರವಸೆ ನಂಬಿ ಜನರು ಶೋಭಾ ಕರಂದ್ಲಾಜೆ ಅವರನ್ನು ಗೆಲ್ಲಿಸಿದ್ದರು. ಅಡಕೆ ಬೆಳೆಗಾರರ ಸಮಸ್ಯೆ ಬಗೆಹರಿಸುವ ಗೋರಖ್ ಸಿಂಗ್ ವರದಿ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದರು. ಅದನ್ನು ಮರೆತು ಅಡಕೆ ಬೆಳೆಗಾರರಿಗೆ ಅನ್ಯಾಯ ಮಾಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಡಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ಕೇಂದ್ರ ಆಹಾರ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಾಟೀಲ್ ಹೇಳಿಕೆ ನೀಡಿದ್ದರು. ಅದನ್ನು ಬಿಜೆಪಿ ಖಂಡಿಸಲಿಲ್ಲ. ಬಿಜೆಪಿ ಅಡಕೆ ಮಾನ ಕಳೆಯಿತು. ಶೋಭಾ ಕೇಂದ್ರ ಸಚಿವರಾಗಿದ್ದಾಗಲೇ ಕಸ್ತೂರಿ ರಂಗನ್ ವರದಿಯು 4 ಬಾರಿ ನೋಟಿಫಿಕೇಷನ್ ಆಗಿದೆ. ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿತ್ತು. ಕಸ್ತೂರಿ ರಂಗನ್ ವರದಿ ಕುರಿತು ಕೇಂದ್ರದಲ್ಲಿ ಸಭೆ ಕರೆದರೆ ಶೋಭಾ ಗೈರಾಗಿದ್ದರು. ಮಲೆನಾಡು ಭಾಗದಲ್ಲಿ ಅತಿವೃಷ್ಟಿ, ಅನಾವೃಷ್ಟಿಯೂ ಆಗಿದೆ. ರಾಜ್ಯಕ್ಕೆ ಬರುವ ಅನುದಾನ, ಪರಿಹಾರದ ಬಗ್ಗೆ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ರಾಜ್ಯಕ್ಕೆ ನೆರೆ ಬಂದಾಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಡಬಲ್ ಇಂಜಿನ್ ಸರ್ಕಾರ ಇದ್ದರೂ ರೈತರ ನೋವುಗಳಿಗೆ ಸ್ಪಂದಿಸಲಿಲ್ಲ. ಈಗ ಸುಪ್ರೀಂಕೋರ್ಟ್‌ಗೆ ಹೋಗಿ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಪಡೆಯಬೇಕಾಗಿದೆ. ಅಕ್ಕಿಯಲ್ಲೂ ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಯಾರೂ ಹಸಿವಿನಿಂದ ಇರಬಾರದು ಎಂದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಫುಡ್ ಆ್ಯಕ್ಟ್ ತಂದು 10 ಕೆಜಿ ಅಕ್ಕಿ ನೀಡುವ ಯೋಜನೆ ಪ್ರಾರಂಭಿಸಲಾಯಿತು. ಅದನ್ನು ಬಿಜೆಪಿ ಸರ್ಕಾರ ಇದ್ದಾಗ 5 ಕೆ.ಜಿ.ಗೆ ಇಳಿಸಲಾಯಿತು ಎಂದು ಹರಿಹಾಯ್ದರು.
ಗ್ಯಾರಂಟಿ ಯೋಜನೆಗೆ 5 ಕೋಟಿ ಅಕ್ಕಿಯನ್ನು ಹಣ ನೀಡಿ ಖರೀದಿ ಮಾಡುತ್ತೇವೆ ಎಂದರೂ ಕೇಂದ್ರ ನೀಡಲಿಲ್ಲ. ಗೋದಾಮಿನಲ್ಲಿ ಲಕ್ಷಗಟ್ಟಲೆ ಟನ್ ಅಕ್ಕಿ ದಾಸ್ತಾನು ಇತ್ತು. 29 ಸಂಸದರು ತುಟಿ ಬಿಚ್ಚಲಿಲ್ಲ. ಅಕ್ಕಿಯಲ್ಲೂ ಬಿಜೆಪಿ ರಾಜಕೀಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಬಾನಿ, ಅದಾನಿ ಸೇರಿದಂತೆ ದೇಶದ ಹಲವಾರು ಉದ್ಯಮಿಗಳಿಗೆ 16 ಲಕ್ಷ ಕೋಟಿ ರೂಪಾಯಿ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ ಎಂದು ಟೀಕಿಸಿದರು.
ಜಯಪ್ರಕಾಶ ಹೆಗ್ಡೆ ಸಂಸದರಾಗಿದ್ದ ಅಲ್ಪ ಸಮಯದಲ್ಲೇ ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಶಾಶ್ವತ ಪರಿಹಾರ ಹುಡುಕಲು ಪ್ರಯತ್ನ ನಡೆಸಿದ್ದರು. ಸಣ್ಣ, ಅತಿಸಣ್ಣ ರೈತರ ಸಾಲಮನ್ನಾ ಮಾಡಲಾಗಿತ್ತು. ಕಡೂರಿಗೆ ರೈಲ್ವೆ ಸಂಪರ್ಕ ಕಲ್ಪಿಸಲು ಜಯಪ್ರಕಾಶ ಹೆಗ್ಡೆ ಪಾತ್ರ ಇತ್ತು ಎಂದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ಮುಖಂಡರಾದ ಸಾಜು, ಪ್ರಶಾಂತ್ ಎಲ್. ಶೆಟ್ಟಿ, ಎಂ.ಆರ್.ರವಿಶಂಕರ್, ಮುಕುಂದ, ಬೆನ್ನಿ, ಅಂಜುಂ, ಜುಬೇದಾ, ಮುನಾವರ್ ಪಾಷಾ, ಸೋಜ, ವಾಸಿಂ, ಸುರೈಯಾಭಾನು, ಕುಮಾರಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net